ಪ್ರಶ್ನೆ: ನಾವು ಹಿಂದೂಗಳು. ನನ್ನ ಮದುವೆಯಾಗಿ ಒಂದು ವರ್ಷವೂ ಆಗಿಲ್ಲ. ನನ್ನ ಹೆಂಡತಿ ಮದುವೆಯಾದ 15 ದಿವಸಕ್ಕೆ ನನಗೆ ಹೇಳದೆ ಹೊರಟುಹೋದಳು. ಎಲ್ಲಿಗೆ ಹೋಗುತ್ತೇನೆ ಎಂದು ಹೇಳಲಿಲ್ಲ. ನಾನು ಪಿರ್ಯಾದು ಕೊಟ್ಟಾಗ ಆಕೆ ಠಾಣೆಗೆ ಬಂದು ಅವಳಿಗೆ ಈ ಮದುವೆ ಇಷ್ಟವಿಲ್ಲವೆಂದು ಬರೆದುಕೊಟ್ಟಿದ್ದಾಳೆ. ನನ್ನ ಜತೆ ಸಂಸಾರ ಮಾಡುವುದಿಲ್ಲ ಎಂದು ಹೇಳಿದ್ದಾಳೆ. ನಮ್ಮಿಬ್ಬರ ಮಧ್ಯೆ ದೈಹಿಕ ಸಂಬಂಧವೂ ಆಗಿಲ್ಲ. ಈಗ ನಾನು ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಎಷ್ಟು ದಿನದಲ್ಲಿ ವಿಚ್ಚೇದನ ಸಿಗುತ್ತದೆ? ಅವಳು ಬರೆದುಕೊಟ್ಟಿರುವುದರಿಂದ ನಾನು ಹಾಗೆಯೇ ಬೇರೆ ಮದುವೆ ಆಗಬಹುದೇ? ನನಗೆ ಕಾನೂನುನಲ್ಲಿ ಏನು ಪರಿಹಾರವಿದೆ ಎಂದು ತಿಳಿಸಿ.
ಉತ್ತರ: (1) ಹಿಂದೂಗಳಲ್ಲಿ ಒಮ್ಮೆ ಮದುವೆ ಆದರೆ ವಿಚ್ಛೇದನ ಪಡೆಯದೆ ಮರುಮದುವೆ ಆಗುವಂತಿಲ್ಲ. ಹಾಗೆ ಆದರೆ ಅದು ಶಿಕ್ಷಾರ್ಹ ಅಪರಾಧ ಆಗುತ್ತದೆ.
(2) ಹಿಂದೂ ವಿವಾಹ ಕಾಯ್ದೆ ಕಲಂ 14 – ವಿವಾಹವಾದ ಒಂದು ವರ್ಷದೊಳಗೆ ವಿಚ್ಛೇದನಕ್ಕೆ ದಾವೆ/ಅರ್ಜಿ ಹಾಕಲು ಆಗುವುದಿಲ್ಲ. ಆದರೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ನ್ಯಾಯಲಯವು ಒಂದು ವರ್ಷದೊಳಗೆ ವಿಚ್ಛೇದನಕ್ಕೆ ಅನುಮತಿ ಕೊಡಬಹುದು. ಈ ಬಗ್ಗೆ ಉಚ್ಚ ನ್ಯಾಯಾಲಯದ ಅಧಿನಿಯಮಗಳನ್ನು ಅನುಸರಿಸಿಯೇ ಕೊಡಬೇಕು.
(3) ನೀವು ಇಬ್ಬರು ಸೇರಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಅರ್ಜಿ ಹಾಕಿದರೆ 6 ತಿಂಗಳ ನಂತರ ನಿಮಗೆ ನ್ಯಾಯಾಲಯ ವಿಚ್ಛೇದನ ಆದೇಶ ಕೊಡುತ್ತದೆ. ಈ ಅರ್ಜಿಯನ್ನು ನೀವು ವಿವಾಹವಾದ ಒಂದು ವರ್ಷದ ನಂತರ ಕೊಡಬೇಕು.
(4) ನಿಮ್ಮ ಪತ್ನಿ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆಯಲು ಮುಂದೆ ಬರದಿದ್ದರೆ ನೀವೇ ಪ್ರತ್ಯೇಕವಾಗಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಬಹುದು. ಪತಿಯ ಜತೆ ವೈವಾಹಿಕ ಸಂಬಂಧವನ್ನು ನಿರಾಕರಿಸುವುದು ಕ್ರೂರತೆಯಾಗುತ್ತದೆ. ಈ ಆಧಾರದ ಮೇಲೆ ವಿಚ್ಚೇದನಕ್ಕೆ ಪ್ರಯತ್ನಿಸಬಹುದು.
(5) ವಿಚ್ಛೇದನಕ್ಕೆ ಪ್ರಕರಣ ನ್ಯಾಯಾಲಯದಲ್ಲಿ ಕೆಲವೇ ದಿನಗಳಲ್ಲಿ ಮುಗಿಯುವುದಿಲ್ಲ. ಇಬ್ಬರು ರಾಜಿ ಸೂತ್ರಕ್ಕೆ ಬಂದಾಗ ಮಾತ್ರ ಬೇಗ ತೀರ್ಮಾನವಾಗುತ್ತದೆ. ಇಲ್ಲವಾದಲ್ಲಿ ವರ್ಷಗಳು ಆಗಬಹುದು.
(ಅಂಕಣಕಾರರು ಹಿರಿಯ ವಕೀಲೆ ಹಾಗೂ ಮಧ್ಯಸ್ಥಿಕೆದಾರರು)
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)