ನ್ಯೂಸ್

ಕಂದಾಯ ಬೇರೆಯವರು ಪಾವತಿ ಮಾಡುತ್ತಿದ್ದರೆ ಜಮೀನು ನಮ್ಮ ಹೆಸರಿಗೆ ಹೇಗೆ ಮಾಡಿಕೊಳ್ಳುವುದು?

suchetana
ಪ್ರಶ್ನೆ: ನಾನು ಸಾಗರ, 40 ವರ್ಷದ ಹಿಂದೆ ನಮ್ಮ ತಾತ ಇದ್ದಾಗ ನಮ್ಮ ಖಾಲಿ ಜಾಗದ ತಕರಾರು ಆಗಿ ಕೋರ್ಟಿಗೆ ಹೊಗಿತ್ತು. ತಾಲ್ಲೂಕು ಹಾಗೂ ಜಿಲ್ಲಾ ಕೋರ್ಟಿನಲ್ಲಿ ಕೇಸ್ ನಮ್ಮಂತೆಯೇ ಆಗಿದೆ, ಆದರೆ ಆವಾಗ ಪಂಚಾಯಿತಿಯಲ್ಲಿ ನಮ್ಮ ವಿರೋಧಿಗಳ ಹಿಡಿತ ಇತ್ತು. ಆಗ ಅವರು ಆ ಜಾಗವನ್ನು ಅವರ ಹೆಸರಿನಲ್ಲಿ ಮಾಡಿಕೊಂಡಿದ್ದರು. ಬಳಿಕ ನ್ಯಾಯ ನಮ್ಮ ಪರವಾಗಿ ಆಯ್ತು. ಆವಾಗಿಂದ ಇವತ್ತಿನವರೆಗೂ ಆ ಜಾಗ ನಮ್ಮ ಹಿಡಿತದಲ್ಲಿದೆ. ಆದರೆ ಕೂಡಲೇ ನಮ್ಮ ತಾತ ತೀರಿ ಹೋದ ಕಾರಣ ಆ ಜಾಗವನ್ನು ತೀರ್ಪು ಬಂದಂತೆ ನಮ್ಮ ಹೆಸರಿಗೆ ಮಾಡಿಕೊಳ್ಳೋಕೆ ಆಗಿಲ್ಲ, ಮತ್ತು ಆ ಜಾಗದ ಕಂದಾಯ ಇನ್ನು ನಮ್ಮ ವಿರೋಧಿಗಳೇ ಪಾವತಿ ಮಾಡುತ್ತಾರೆ. ಈಗ ಆ ಜಾಗವನ್ನು ನ್ಯಾಯಾಲಯದ ತೀರ್ಪು ಬಂದಂತೆ ನಮ್ಮ ಹೆಸರಿಗೆ ಮಾಡಿಕೊಳ್ಳಬೇಕಾದರೆ ಏನು ಮಾಡಬೇಕು? ವಿರೋಧಿಗಳು ಹಣದ ಪ್ರಬಲ ಇದೆ, ನಮ್ಮ ಹೆಸರಿಗೆ ಮಾಡಿಕೊಳ್ಳೋಕೆ ಏನು ಮಾಡಬೇಕು ಅಂತ ದಯವಿಟ್ಟು ತಿಳಿಸಿ ಕೊಡಿ. ಕೋರ್ಟಿನಲ್ಲಿ ತೀರ್ಪು ನಮ್ಮ ಬಳಿ ಇರುತ್ತವೆ.

ಉತ್ತರ: ನೀವು ತಿಳಿಸಿದ ಹಾಗೆ ಕೋರ್ಟಿನಲ್ಲಿ ನಿಮ್ಮ ಪರ ತೀರ್ಪಾಗಿದ್ದರೆ, ಪಂಚಾಯಿತಿ ಪ್ರಾಧಿಕಾರಕ್ಕೆ ನಿಮ್ಮ ಹೆಸರಿಗೆ ಖಾತೆ ದಾಖಲೆ ಮಾಡಲು ಒಂದು ಅರ್ಜಿ ಕೊಡಿ. ಕೋರ್ಟಿನ ಆದೇಶವನ್ನು ಸಹ ಅದರ ಜೊತೆ ಲಗತ್ತಿಸಿ. ನಿಮ್ಮ ತಾತನ ವಾರಸುದಾರರು ಯಾರೋ ಅವರು ಅರ್ಜಿ ಕೊಡಲಿ. . ಈ ಅರ್ಜಿಗೆ ಪಂಚಾಯಿತಿಯವರು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದ ಪಕ್ಷದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಆಫ್ ಮ್ಯಾಂಡಮಸ್ ಅರ್ಜಿಯನ್ನು ಸಲ್ಲಿಸಿ ಪಂಚಾಯಿತಿ ಅಧಿಕಾರಿಯವರಿಗೆ ನಿಮ್ಮ ಅರ್ಜಿಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಆದೇಶವನ್ನು ಉಚ್ಛ ನ್ಯಾಯಾಲಯದಿಂದ ಪಡೆದು ಆ ನಂತರ ಖಾತೆ ಬದಲಾವಣೆಗೆ ಕಾದು ನೋಡಿ. ಮುಂದುವರಿಸತಕ್ಕದ್ದು.

ಒಂದು ವೇಳೆ ಅಧಿಕಾರಿಗಳು ಕೊಟ್ಟ ಆದೇಶ ನಿಮಗೆ ಸರಿಎನಿಸದಿದ್ದರೆ ಅದರಮೇಲೆ ಮುಂದಿನ ಕಾನೂನು ಕ್ರಮವನ್ನು ಜರುಗಿಸಬೇಕಾಗುತ್ತದೆ. ನಿಮ್ಮ ತಾತನ ಆಸ್ತಿಗೆ ಎದುರುದಾರರು ಕಂದಾಯ ಕಟ್ಟಿರುವ ಬಗ್ಗೆ ಯೋಚಿಸ ಬೇಡಿ. ಒಬ್ಬರ ಆಸ್ತಿಗೆ ಮತ್ತೊಬ್ಬರು ಕಂದಾಯ ಕಟ್ಟುವುದರಿಂದ ಆಸ್ತಿ ಅವರದಾಗುವುದಿಲ್ಲ. ಎಲ್ಲಕ್ಕೂ ಮುಂಚೆ ಒಮ್ಮೆ ನಿಮ್ಮ ಸ್ಥಳೀಯ ವಕೀಲರನ್ನು ದಾಖಲೆಗಳ ಸಮೇತ ಭೇಟಿಮಾಡಿ. ನ್ಯಾಯಾಲಯದ ಆದೇಶದ ಅಮಲ್ಜಾರಿಗೆ ಅರ್ಜಿ ಹಾಕಲು ಸಾಧ್ಯವೇ ಎನ್ನುವುದನ್ನು ಅವರು ಪರಿಶೀಲಿಸಿ ತಿಳಿಸುತ್ತಾರೆ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ. ವಿಷಯ ಪ್ರೀತಿಯ ಪ್ರದರ್ಶನ.