ಮುಂಡರಗಿ: ಎನ್‌ಡಬ್ಲುೃಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಬೈಕ್ ಸವಾರನ ಕುಟುಂಬಕ್ಕೆ ಪರಿಹಾರ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿವಾಣಿ ಹಿರಿಯ ನ್ಯಾಯಾಲಯದ ಆದೇಶದನ್ವಯ ಶನಿವಾರ ಬಸ್ ಅನ್ನು ಜಪ್ತಿ ಮಾಡಲಾಗಿದೆ.
ಘಟನೆ ಹಿನ್ನೆಲೆ: ತಾಲೂಕಿನ ಡಂಬಳ ಸಮೀಪದಲ್ಲಿ 2015ರಲ್ಲಿ ಬಸ್-ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಬೈಕ್ ಸವಾರ ಹಿರೇವಡ್ಡಟ್ಟಿ ಗ್ರಾಮದ ಹನುಮಂತ ಜಂಗಣವಾರಿ ಎಂಬುವವರು ಮೃತಪಟ್ಟಿದ್ದರು. ಮೃತನ ತಾಯಿ ಹುಲಿಗೆಮ್ಮ ಜಂಗಣವಾರಿ ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದರು.
ಹುಲಿಗೆಮ್ಮ ಅವರ ಪರವಾಗಿ ಸ್ಥಳೀಯ ವಕೀಲ ಗುರುರಾಜ ಈಳಿಗೇರ ವಾದ ಮಂಡಿಸಿದ್ದರು. ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯವು 2020ರಲ್ಲಿ ಪರಿಹಾರ ನೀಡಲು ಆದೇಶಿಸಿತ್ತು. ಆದರೆ, ಇದುವರೆಗೂ ವಾಕರಸಾ ಸಂಸ್ಥೆಯು ಪರಿಹಾರ ನೀಡದ ಕಾರಣ ನ್ಯಾಯಾಲಯವು ಬಸ್ ಜಪ್ತಿ ಮಾಡಲು ಆದೇಶ ಹೊರಡಿಸಿತ್ತು. ಹೀಗಾಗಿ ಬಸ್ ಅನ್ನು ಜಪ್ತಿ ಮಾಡಿ ನ್ಯಾಯಾಲಯ ಆವರಣದಲ್ಲಿ ತಂದು ನಿಲ್ಲಿಸಲಾಗಿದೆ.