ನವದೆಹಲಿ: ಟೆಕ್ ದೈತ್ಯ ಕಂಪನಿಗಳಾದ ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಅನ್ನು ಮೀರಿಸಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಮಾರ್ಪಟ್ಟಿದೆ ಎನ್ವಿಡಿಯಾ (Nvidia). ಷೇರುಗಳ ಬೆಲೆಯಲ್ಲಿ ಅಭೂತಪೂರ್ವ ಏರಿಕೆಯಿಂದಾಗಿ ಎನ್ವಿಡಿಯಾ ಮೈಲಿಗಲ್ಲು ಮುಟ್ಟಿದೆ.
ಎನ್ವಿಡಿಯಾ ಷೇರುಗಳ ಬೆಲೆ ಮಂಗಳವಾರ ಅಂದಾಜು 3.5% ರಷ್ಟು ಏರಿಕೆ ಕಂಡಿವೆ. ಈ ಮೂಲಕ ಈ ಕಂಪನಿಯ ಮಾರುಕಟ್ಟೆ ಮೌಲ್ಯ ಅಂದಾಜು 3.34 ಲಕ್ಷ ಕೋಟಿ ಡಾಲರ್ಗೆ (278 ಲಕ್ಷ ಕೋಟಿ ರೂಪಾಯಿ) ಏರಿಕೆಯಾಗಿದೆ. ಈ ಜಿಗಿತದ ಮೂಲಕ ಟೆಕ್ ಕಂಪನಿಗಳಲ್ಲಿ ಉನ್ನತ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದ ಮೈಕ್ರೋಸಾಫ್ಟ್ ಮತ್ತು ಆ್ಯಪಲ್ ಅನ್ನು ಎನ್ವಿಡಿಯಾ ಹಿಂದಿಕ್ಕಿದೆ.
ಎನ್ವಿಡಿಯಾ ಮಾರುಕಟ್ಟೆ ಮೌಲ್ಯದಲ್ಲಿನ ಅಭೂತಪೂರ್ವ ಏರಿಕೆಯು ಪ್ರಾಥಮಿಕವಾಗಿ ಅದರ ಎಐ ಆಪ್ಟಿಮೈಸ್ಡ್ ಚಿಪ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಉತ್ತೇಜಿಸಲ್ಪಟ್ಟಿದೆ. ಈ ಕಂಪನಿಯ ಷೇರುಗಳ ಬೆಲೆ ಈ ವರ್ಷವೊಂದರಲ್ಲೇ 170% ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿವೆ, ಅಕ್ಟೋಬರ್ 2022ರಲ್ಲಿ ಕನಿಷ್ಠ ಬೆಲೆ ಮಟ್ಟದಿಂದ ಈ ಕಂಪನಿಯ ಷೇರು ಬೆಲೆ ಅಂದಾಜು 1,100% ರಷ್ಟು ಏರಿಕೆಯಾಗಿದೆ.
ಅಸಾಧಾರಣ ಗಳಿಕೆಗಳು ಮತ್ತು ಎಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕುರಿತು ಬೆಳೆಯುತ್ತಿರುವ ಹೂಡಿಕೆದಾರರ ಉತ್ಸಾಹವು ಕಂಪನಿಯ ಮೌಲ್ಯ ಹೆಚ್ಚಿಸಿದೆ. ಎನ್‌ವಿಡಿಯಾದ ಮಾರುಕಟ್ಟೆ ಮೌಲ್ಯವು ಕೇವಲ 96 ದಿನಗಳಲ್ಲಿ 2 ಲಕ್ಷ ಕೋಟಿ ಡಾಲರ್ನಿಂದ 3 ಲಕ್ಷ ಕೋಟಿ ಡಾಲರ್ಗೆ ಏರಿದೆ.
ಇದೇ ಸಾಧನೆ ಮಾಡಲು ಮೈಕ್ರೋಸಾಫ್ಟ್ 945 ದಿನಗಳನ್ನು ಮತ್ತು ಆ್ಯಪಲ್ 1,044 ದಿನಗಳನ್ನು ತೆಗೆದುಕೊಂಡಿವೆ ಎನ್ನುತ್ತದೆ ಬೆಸ್ಪೋಕ್ ಇನ್ವೆಸ್ಟ್ಮೆಂಟ್ ಸಂಸ್ಥೆ.
1925 ರಿಂದ ಕೇವಲ 11 ಅಮೆರಿಕ ಕಂಪನಿಗಳು ಮಾರುಕಟ್ಟೆ ಮೌಲ್ಯದಲ್ಲಿ ಅಗ್ರ ಸ್ಥಾನ ಪಡೆದಿವೆ. ಉದಾಹರಣೆಗೆ, ಮೈಕ್ರೋಸಾಫ್ಟ್ 1990 ರ ದಶಕದ ಅಂತ್ಯದಲ್ಲಿ ಮೊದಲ ಸ್ಥಾನ ಗಳಿಸಿತು. ಆದರೆ ಕಳೆದ ದಶಕದಲ್ಲಿ ಬಲವಾಗಿ ಮತ್ತೆ ಮುಂಚೂಣಿಗೆ ಬರುವ ಮೊದಲು ಡಾಟ್ಕಾಮ್ ಗುಳ್ಳೆ ಒಡೆದ ಹಿನ್ನೆಲೆಯಲ್ಲಿ ಹಿನ್ನಡೆ ಕಂಡಿತ್ತು.
ಎಕ್ಸಾನ್ ಮೊಬಿಲ್ ಕಂಪನಿಯು ಒಮ್ಮೆ ವಿಶ್ವದ ಅತ್ಯಂತ ಬೆಲೆಬಾಳುವ ಕಂಪನಿಯಾಗಿತ್ತು. ತೈಲ ಬೆಲೆಗಳ ಕುಸಿತದಿಂದಾಗಿ ಇದರ ಷೇರುಗಳ ಬೆಲೆ ಕುಸಿಯಿತು.
ಎನ್‌ವಿಡಿಯಾದ ಅಸಾಧಾರಣ ಕಾರ್ಯಕ್ಷಮತೆಯು ಅದರ ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳಿಂದ ಗೋಚರಿಸುತ್ತದೆ. ಇದರ ಆದಾಯವು 26 ಶತಕೋಟಿ ಡಾಲರ್ ಆಗಿದ್ದು, ಮೂರು ಪಟ್ಟು ಹೆಚ್ಚಾಗಿದೆ. ನಿವ್ವಳ ಲಾಭ 14.9 ಶತಕೋಟಿ ಡಾಲರ್ ಆಗಿದ್ದು, ಏಳು ಪಟ್ಟು ಹೆಚ್ಚಾಗಿದೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯವು 120 ಶತಕೋಟಿ ಡಾಲರ್ ಆಗಿ, ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. 2026 ರ ಆರ್ಥಿಕ ವರ್ಷದಲ್ಲಿ ಹೆಚ್ಚುವರಿ 33% ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ,
ಎನ್‌ವಿಡಿಯಾದ ಮಾತ್ರವಲ್ಲದೆ, ಸೂಪರ್ ಮೈಕ್ರೋ ಕಂಪ್ಯೂಟರ್ ಮತ್ತು ಆರ್ಮ್ ಹೋಲ್ಡಿಂಗ್ಸ್‌ನಂತಹ ಇತರ ತಂತ್ರಜ್ಞಾನ ಕಂಪನಿಗಳು ಸಹ ಬೆಳೆಯುತ್ತಿರುವ ಎಐ ಮಾರುಕಟ್ಟೆಯಿಂದ ಗಮನಾರ್ಹ ಲಾಭಗಳನ್ನು ಕಂಡಿವೆ.
ಎನ್‌ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಅವರು ಫೋರ್ಬ್ಸ್‌ನ ನೈಜ-ಸಮಯದ ಬಿಲಿಯನೇರ್ ಶ್ರೇಯಾಂಕಗಳ ಪ್ರಕಾರ ಜಾಗತಿಕವಾಗಿ 11ನೇ ಶ್ರೀಮಂತ ವ್ಯಕ್ತಿಯ ಸ್ಥಾನಕ್ಕೆ ಏರಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯವು ಕೇವಲ ಒಂದೇ ದಿನದಲ್ಲಿ 4 ಶತಕೋಟಿ ಡಾಲರ್ಗಳಷ್ಟು (33,381 ಕೋಟಿ ರೂಪಾಯಿ) ಏರಿಕೆಯಾಗಿದೆ. ಫೋರ್ಬ್ಸ್ ಪ್ರಕಾರ, 2019 ರಲ್ಲಿ ಜಾಗತಿಕವಾಗಿ 546 ನೇ ಶ್ರೀಮಂತ ವ್ಯಕ್ತಿಯಾಗಿ ಸ್ಥಾನ ಪಡೆದಿದ್ದ ಜೆನ್ಸನ್ ಹುವಾಂಗ್ ಅವರ ನಿವ್ವಳ ಆಸ್ತಿ ಮೌಲ್ಯವು ಕಳೆದ ಐದು ವರ್ಷಗಳಲ್ಲಿ 114 ಶತಕೋಟಿ ಡಾಲರ್ನಷ್ಟು ಏರಿಕೆ ಕಂಡಿದೆ. 2023ರ ಅಂತ್ಯದ ವೇಳೆಗೆ, ಹುವಾಂಗ್ ಅವರ ನಿವ್ವಳ ಆಸ್ತಿ ಮೌಲ್ಯವು 21 ಶತಕೋಟಿ ಡಾಲರ್ ತಲುಪಿತ್ತು. ಇದರಿಂದಾಗಿ ಅವರು ವಿಶ್ವದ76 ನೇ ಶ್ರೀಮಂತ ವ್ಯಕ್ತಿಯಾಗಿದ್ದರು.