ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಅಡಕೆಯ ಮೇಲೆ ಅಂತಾರಾಷ್ಟ್ರೀಯ ಮಟ್ಟದ ಅಧ್ಯಯನ ವರದಿಯ ಪ್ರಹಾರ ಮತ್ತೊಮ್ಮೆ ಆಗತೊಡಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆಂಡ್ ಕ್ಯಾನ್ಸರ್ (ಐಎಆರ್ಸಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಅಡಕೆಯನ್ನು ಕ್ಯಾನ್ಸರ್ಕಾರಕ ಎಂದು ಬಣ್ಣಿಸಿದೆ. ‘ಜಗಿಯುವ ತಂಬಾಕು ಮತ್ತು ಅಡಕೆಯನ್ನು ಜಗತ್ತಿನಲ್ಲಿ ಸುಮಾರು 90 ಕೋಟಿ ಜನರು ಬಳಸುತ್ತಿದ್ದಾರೆ. ಜಗಿಯುವ ತಂಬಾಕಿನಿಂದ 1.2 ಲಕ್ಷ ಬಾಯಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 83,400 ಪ್ರಕರಣಗಳು ಭಾರತದಲ್ಲೇ ದಾಖಲಾಗಿವೆ.
ಇದಲ್ಲದೆ ಬಾಂಗ್ಲಾದೇಶ, ಪಾಕಿಸ್ತಾನ, ಚೀನಾ, ಮ್ಯಾನ್ಮಾರ್, ಶ್ರೀಲಂಕಾ ಹೀಗೆ ಸುತ್ತಮುತ್ತಲಿನ ದೇಶಗಳಲ್ಲಿಯೂ ಸಾವಿರಾರು ಬಾಯಿ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಗುಟ್ಖಾದಂತಹ ಉತ್ಪನ್ನಗಳ ಬಳಕೆ ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಜಗಿಯುವ ತಂಬಾಕು ಮತ್ತು ಅಡಕೆ ಬೆಳೆಯ ಮೇಲೆ ಕಡಿವಾಣ ಹಾಕಬೇಕು’ ಎಂದು ವರದಿಯಲ್ಲಿ ಹೇಳಲಾಗಿದೆ. ಚೀನಾ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ರಿಕಾದ ಪೂರ್ವ ಕರಾವಳಿ, ಫಿಲಿಪೈನ್ಸ್, ಮಲೇಷ್ಯಾ ಮುಂತಾದೆಡೆ ಅಡಕೆ ಬೆಳೆಯಲಾಗುತ್ತಿದೆಯಾದರೂ ಅತಿ ಹೆಚ್ಚು ಅಡಕೆ ಬೆಳೆಯುವ ದೇಶವೆಂದರೆ ಭಾರತವೇ. ಕೇರಳ, ತಮಿಳುನಾಡು, ಅಸ್ಸಾಂ, ಮೇಘಾಲಯ, ಪಶ್ಚಿಮಬಂಗಾಳ ಮುಂತಾದ ರಾಜ್ಯಗಳಲ್ಲಿ ಅಡಕೆ ಬೆಳೆಯುತ್ತಿದ್ದರೂ ಇಡೀ ದೇಶದಲ್ಲಿ ಕರ್ನಾಟಕವೇ ಅತಿ ಹೆಚ್ಚು (ಶೇ. 40) ಅಡಕೆ ಬೆಳೆಯುವ ರಾಜ್ಯ. ಹಾಗಾಗಿ ಈ ಅಧ್ಯಯನ ವರದಿಯಿಂದ ಕರ್ನಾಟಕದ ಅಡಕೆ ಬೆಳೆಗಾರರ ವಲಯ ಮತ್ತೆ ತಲ್ಲಣಗೊಂಡಿದೆ.
ಈ ರೀತಿಯ ವರದಿ ಬರುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ 2003ರಲ್ಲಿಯೂ ಈ ಸಂಸ್ಥೆಯಿಂದ ಇಂತಹ ಪ್ರತಿಕೂಲ ವರದಿ ಬಂದದ್ದಿದೆ. ಆಗ ಕೇಂದ್ರ ಸರ್ಕಾರವೇ ‘ಅಡಕೆ ಜಗಿಯುವುದು ಹಾನಿಕಾರಕ’ ಎಂಬ ಎಚ್ಚರಿಕೆಯನ್ನು ಗುಟ್ಕಾ ಪ್ಯಾಕೆಟ್ಗಳಲ್ಲಿ ಮುದ್ರಿಸುವಂತೆ ಮಾಡಿತು. ಅಲ್ಲಿಂದೀಚೆಗೆ ಈ ಕುರಿತ ಚರ್ಚೆ ನಡೆಯುತ್ತಲೇ ಇದೆ. ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಸಮರ ಕೂಡ ನಡೆಯುತ್ತಿದೆ. ಅಡಕೆಯ ಆರೋಗ್ಯಕರ ಅಂಶಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲ, ಭಾರತದಲ್ಲೇ ಅನೇಕರಿಗೆ ಅರಿವಿಲ್ಲ. ಲೋಕಸಭೆಯಲ್ಲಿ 2019ರಲ್ಲಿ ಗುಜರಾತ್ ಸಂಸದರೊಬ್ಬರು ಎತ್ತಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ರಾಜ್ಯ ಸಚಿವರಾಗಿದ್ದ ಅಶ್ವಿನಿ ಕುಮಾರ್ ಚೌಬೆ ಅವರೇ ‘ಅಡಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಉತ್ತರಿಸಿದ್ದರು!
ಈ ಹಿನ್ನೆಲೆಯಲ್ಲಿ ಅಡಕೆಯ ಆರೋಗ್ಯಕರ ಅಂಶಗಳ ಬಗ್ಗೆ ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಅಡಕೆ ಜತೆ ತಂಬಾಕನ್ನು ಸೇವಿಸುವುದು ಅಪಾಯಕಾರಿ ಎಂಬ ಅಂಶ ಒಪ್ಪಬಹುದಾದರೂ ತಂಬಾಕಿಲ್ಲದೆ ಅಡಕೆಯನ್ನು ಪ್ರತ್ಯೇಕವಾಗಿ ಅಥವಾ ವೀಳ್ಯದೆಲೆ-ಸುಣ್ಣ ಮತ್ತಿತರ ಆರೋಗ್ಯಕರ ಪದಾರ್ಥಗಳ ಜತೆ ಸೇವಿಸುವುದು ಅಪಾಯಕಾರಿಯಲ್ಲ ಎಂಬುದನ್ನು ಮನನ ಮಾಡಿಕೊಡಬೇಕಾಗಿದೆ. ಅಡಕೆಯ ಮೇಲೆ ಆಗಾಗ ಕ್ಯಾನ್ಸರ್ಕಾರಕ ಎಂಬ ತೂಗುಗತ್ತಿ ತೂಗುವುದನ್ನು ತಪ್ಪಿಸಲು ಭಾರತೀಯ ಸಂಶೋಧಕರು ಅಡಕೆಯ ಉತ್ತಮ ಗುಣಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕಾಗಿದೆ. ಇದಕ್ಕೆ ಅಗತ್ಯ ಬೆಂಬಲವನ್ನು ಸರ್ಕಾರ ನೀಡಬೇಕಾಗಿದೆ.