ಸೊರಬ: ಮಗುವಿನ ಬೆಳವಣಿಗೆಗೆ ತಾಯಿ ಹಾಲು ಮುಖ್ಯ. ಮಗುವಿಗೆ ಅಗತ್ಯ ಪೋಷಕಾಂಶ ಒದಗಿಸುವ ಜತೆಗೆ ರೋಗನೀರೋಧಕ ಶಕ್ತಿ ಹೆಚ್ಚಿಸುತ್ತದೆ. ಹಾಗಾಗಿ ತಾಯಂದಿರು ಹಾಲುಣಿಸಬೇಕು ಎಂದು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಭು ಕೆ. ಸಾಹುಕಾರ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ‘ಸ್ತನ್ಯಪಾನಕ್ಕೆ ಆದ್ಯತೆ ನೀಡಿ ಸುಸ್ಥಿರ ಬೆಂಬಲ ವ್ಯವಸ್ಥೆಗಳನ್ನು ರಚಿಸಿ’ ಎಂಬ ಸಂದೇಶದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷ ಆಗಸ್ಟ್‌ನಲ್ಲಿ ಸ್ತನ್ಯಪಾನ ದಿನವನ್ನು ಆಚರಿಸಲಾಗುತ್ತದೆ. ಇದರ ಮಹತ್ವವನ್ನು ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಮಗುವಿನ ಬೆಳವಣಿಗೆಯಲ್ಲಿ ಸ್ತನ್ಯಪಾನವು ಬಹುಮುಖ್ಯ. ಕೆಲಸದ ಸ್ಥಳಗಳಲ್ಲಿ ಮಗುವಿಗೆ ಹಾಲುಣಿಸಲು ತಾಯಂದಿರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲು ಗಮನ ಹರಿಸಲಾಗುತ್ತಿದೆ ಎಂದರು.
ಮಗುವಿಗೆ ತಾಯಿ ಹಾಲು ನೀಡುವುದರಿಂದ ಆಗುವ ಪ್ರಯೋಜನ ಮತ್ತು ಹಾಲುಣಿಸುವ ಕ್ರಮಗಳ ಬಗ್ಗೆ ಡಾ. ಅಮಿತಾ, ಡಾ. ಪೂಜಾ ಮಾಹಿತಿ ನೀಡಿದರು. ಆಸ್ಪತ್ರೆ ಪ್ರಭಾರ ಶುಶ್ರೂಷಾಧಿಕಾರಿ ಎಲಿಜಬೆತ್, ಹಿರಿಯ ಆರೋಗ್ಯ ನಿರೀಕ್ಷಕ ಶಬ್ಬೀರ್ ಖಾನ್, ಶೂಶ್ರಷಾಧಿಕಾರಿಗಳಾದ ಶಿಲ್ಪಾ ಬೋರ್ಕರ್, ಪುಷ್ಪಾ, ಹಿಮಾಮಣಿ, ವಿನಯಾ, ಶಾರದಾ, ಮಮತಾ, ರೇಖಾ, ಆಶಾ ಕಾರ್ಯಕರ್ತೆಯರು ಇದ್ದರು.