ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರ ವಿತರಣೆ ನಿಲ್ಲಿಸಿರುವುದನ್ನು ಖಂಡಿಸಿ ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಸದಸ್ಯರು ಸಾಗರದಲ್ಲಿ ಹಮ್ಮಿಕೊಂಡಿರುವ ಧರಣಿಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿದರು. ರಾಮಣ್ಣ ಹಸಲರು, ಲಕ್ಷ್ಮಮ್ಮ, ನಾಗರತ್ನಾ, ರವಿ ಕುಗ್ವೆ, ಲತಾಶ್ರೀ, ಕಮಲಾ ಇತರರಿದ್ದರು.  
ನ್ಯೂಸ್

ಬುಡಕಟ್ಟುಗಳಿಗೆ ಪೌಷ್ಟಿಕ ಆಹಾರ ಸ್ಥಗಿತ

ಶಿವಕುಮಾರ ಎಸ್.ಪಿ.

ಸಾಗರ: ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರ ಸಾಮಗ್ರಿ ವಿತರಣೆ ನಿಲ್ಲಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದರು.

ರಾಜ್ಯದಲ್ಲಿ ಬುಡಕಟ್ಟು ಸಮುದಾಯಗಳು ಆರ್ಥಿಕವಾಗಿ ಬಹಳ ಹಿಂದುಳಿದಿವೆ. ಅರಣ್ಯ ಮತ್ತು ಅರಣ್ಯದಂಚಿನಲ್ಲಿ ಕುಟುಂಬಗಳು ವಾಸ ಮಾಡುತ್ತಿವೆ. ಸಿದ್ದರಾಮಯ್ಯ ಸರ್ಕಾರ ಒಂದು ವರ್ಷ ಆಹಾರ ನೀಡುವ ಭರವಸೆ ನೀಡಿತ್ತು. ಆದರೆ ಟೆಂಡರ್ ಕರೆದು ಯೋಜನೆ ಜಾರಿಗೆ ತಂದಿಲ್ಲ. ಪೌಷ್ಟಿಕ ಆಹಾರವನ್ನು ಆಯಾ ಗ್ರಾಮದ ಅಂಗನವಾಡಿಗಳಲ್ಲೇ ನೀಡಬೇಕು. ಕನಿಷ್ಠ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ದೂರಿದರು.
ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು, ಬುಡಕಟ್ಟು ಸಮುದಾಯದವರಿಗೆ 2019-20ರಿಂದ ರಾಜ್ಯ ಸರ್ಕಾರ ಪೌಷ್ಟಿಕ ಆಹಾರವನ್ನು ವರ್ಷದ ಆರು ತಿಂಗಳು ನೀಡುವ ಯೋಜನೆ ಜಾರಿಗೆ ತಂದಿತು. ಈಗಿನ ಸರ್ಕಾರ ಸಹ ಪೌಷ್ಟಿಕ ಆಹಾರ ನೀಡುವ ಭರವಸೆ ನೀಡಿತ್ತು. ಆದರೆ ಟೆಂಡರ್ ಕರೆಯಲಿಲ್ಲ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ನಿಲ್ಲಿಸಿ ಬುಡಕಟ್ಟು ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ. ಟೆಂಡರ್ ಕರೆದು ಆಹಾರ ನೀಡಲು ಸಾಕಷ್ಟು ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಡಿಕೆ ಈಡೇರಿಸುವ ತನಕ ಸತ್ಯಾಗ್ರಹ ಕೈಗೊಂಡಿರುವ ಒಕ್ಕೂಟದ ಸದಸ್ಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಒಲೆ ಹೂಡಿ ಮಧ್ಯಾಹ್ನ ಅಡುಗೆ ತಯಾರಿಸಿ ಊಟ ಮಾಡಿದರು. ನಾಗರತ್ನಾ, ರವಿ ಕುಗ್ವೆ, ಲತಾಶ್ರೀ, ಕಮಲಾ, ಶುಕ್ರ, ಸರಸ್ವತಿ, ಸಾವಿತ್ರಿ, ಕಮಲಾಕ್ಷಿ ಮುಪ್ಪಾನೆ, ಪಾರ್ವತಮ್ಮ, ಚಂದ್ರಶೇಖರ್, ವನಜಾಕ್ಷಿ ಇತರರಿದ್ದರು.