ನ್ಯೂಸ್

VIDEO| ಮಾನವೀಯತೆ ಮರೆತ ಜನತೆ: ಕರೊನಾ ಸೋಂಕು ಇದ್ದ ಮಗುವಿಗೆ ಚಿಕಿತ್ಸೆ ಕೊಟ್ಟಿದ್ದಕ್ಕೆ ನರ್ಸ್​ಗೆ ಬಹಿಷ್ಕಾರ

ಮಂಗಳೂರು: ಇತ್ತಿಚಿನ ದಿನಗಳಲ್ಲಿ ಜನರು ಮಾನವೀಯತೆ ಎಂಬ ಪದವನ್ನೇ ಮರೆಯುತ್ತಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಅದರಲ್ಲೂ ವಿಶೇಷವಾಗಿ ಮಂಗಳೂರಿನಲ್ಲಿ ನಡೆದ ಈ ಘಟನೆಯನ್ನು ಕಂಡ ಬಳಿಕವಂತೂ ಈ ಅನುಮಾನ ಮತ್ತಷ್ಟು ಹೆಚ್ಚಾಗುತ್ತದೆ.

ಆಗಿದ್ದೇನೆಂದರೆ, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿರುವ ಸರಸ್ವತಿ ಮಂಗಳೂರು ನಗರ ಹೊರವಲಯದ ಕೊಣಾಜೆಯಲ್ಲಿ ವಾಸವಾಗಿದ್ದಾರೆ. ಇವರು ಕರೊನಾ ವೈರಸ್​ ಸೋಂಕಿನಿಂದ ಬಳಲುತ್ತಿದ್ದ ಬಂಟ್ವಾಳದ ಸಜಿಪನಡು ಗ್ರಾಮದ ಹತ್ತು ತಿಂಗಳ ಮಗುವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದರು.

ಆದರೆ, ಈ ವಿಷಯ ತಿಳಿದ ಕೊಣಾಜೆಯ ಗ್ರಾಮಸ್ಥರು ಸರಸ್ವತಿ ಅವರ ಮನೆಗೆ ಬಂದು ಕರೊನಾ ವೈರಸ್​ ಸೋಂಕಿರುವ ಮಗುವಿಗೆ ಚಿಕಿತ್ಸೆ ಕೊಟ್ಟಿದ್ದೀರಿ. ನಮಗೂ ಸೋಂಕು ಹರಡುವ ಭೀತಿ ಇದೆ. ಆದ್ದರಿಂದ, ನೀವು ಯಾವುದೇ ಕಾರಣಕ್ಕೂ ನಿಮ್ಮ ಮನೆಯಿಂದ ಹೊರಬರಬಾರದು ಎಂದು ಪಟ್ಟುಹಿಡಿದಿದ್ದಲ್ಲದೆ, ಅವರಿಗೆ ಬಹಿಷ್ಕಾರವನ್ನೂ ಹಾಕಿದರು.

ವಿಷಯ ತಿಳಿದ ಉಳ್ಳಾಲ ಶಾಸಕ ಯು.ಟಿ. ಖಾದರ್​ ಕೊಣಾಜೆಗೆ ಭೇಟಿ ನೀಡಿ, ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದಲ್ಲದೆ, ಕರೊನಾ ಸೋಂಕು ಇರುವ ಮಗುವಿಗೆ ಚಿಕಿತ್ಸೆ ನೀಡಿದ ಮಾತ್ರಕ್ಕೆ ಸೋಂಕು ತಗಲುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.