ನ್ಯೂಸ್

ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಕೇಸ್; ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್​ ಒಪ್ಪಿಗೆ | nimisha-priya

ನವದೆಹಲಿ: ಯೆಮೆನ್‌ಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇಂದು (10) ಒಪ್ಪಿಗೆ ನೀಡಿದೆ.

ನಿಮಿಷಾ ಅವರನ್ನು ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಬ್ಲಡ್ ಮನಿಯನ್ನು (ಸಾವಿಗೆ ಪ್ರತಿಯಾಗಿ ಹಣ ರೂಪದಲ್ಲಿ ನೀಡುವ ಪರಿಹಾರ) ನೀಡಲು ಸಾಧ್ಯವಾದರೆ, ಮೃತರ ಕುಟುಂಬವು ನಿಮಿಷಾ ಅವರಿಗೆ ಕ್ಷಮೆ ನೀಡಬಹುದು ಎಂದು ಪೀಠದ ಗಮನಕ್ಕೆ ತರಲಾಗಿದೆ. ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಪೀಠದ ಮುಂದೆ ಹಿರಿಯ ವಕೀಲ ರಾಗೇಂತ್ ಬಸಂತ್ ಈ ವಿಷಯವನ್ನು ಪ್ರಸ್ತಾಪಿಸಿ, ತುರ್ತು ವಿಚಾರಣೆಗೆ ಕೋರಿದರು. ಯೆಮನ್‌ನ ಶರಿಯತ್ ಕಾನೂನಿನ ಪ್ರಕಾರ ಮೃತರ ಸಂಬಂಧಿಕರು ಕ್ಷಮೆ ನೀಡಲು ಒಪ್ಪಿಕೊಂಡರೆ ಅಪರಾಧಿ ಶಿಕ್ಷೆಯಿಂದ ಪಾರಾಗುತ್ತಾರೆ. ಹಾಗಾಗಿ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಜುಲೈ 14 ರಂದು  ಪ್ರಕರಣವನ್ನು ವಿಚಾರಣೆ ನಡೆಸುವುದಾಗಿ ತಿಳಿಸಿದೆ.

2017ರ ಜುಲೈನಲ್ಲಿ ಯೆಮನ್‌ ಪ್ರಜೆ ತಲಾಲ್ ಅಬ್ದೋ ಮಹದಿ ಎಂಬಾತನನ್ನು ಹತ್ಯೆಗೈದ ಪ್ರಕರಣದಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ ಮರಣದಂಡನೆಗೆ ಗುರಿಯಾಗಿದ್ದಾರೆ. 2017ರಿಂದ ನಿಮಿಷ ಅವರು ಯೆಮನ್‌ನ ರಾಜಧಾನಿ ಸನಾದ ಜೈಲಿನಲ್ಲಿದ್ದಾರೆ.

ನಿಮಿಷಾ ಪ್ರಿಯಾ ಅವರಿಗೆ ಕಾನೂನು ನೆರವು ನೀಡುವ "ಸೇವ್ ನಿಮಿಷ ಪ್ರಿಯಾ - ಇಂಟರ್​ನ್ಯಾಷನಲ್ ಆಕ್ಷನ್ ಕೌನ್ಸಿಲ್" ಎಂಬ ಸಂಸ್ಥೆ ಈ ಅರ್ಜಿಯನ್ನು ಸಲ್ಲಿಸಿದೆ. ನಿಮಿಷಾ ಪ್ರಿಯಳನ್ನು ಗಲ್ಲಿಗೇರಿಸಲು ಯೆಮೆನ್ ಆಡಳಿತವು ಜುಲೈ 16 ರಂದು ತಾತ್ಕಾಲಿಕ ದಿನಾಂಕವನ್ನು ನಿಗದಿಪಡಿಸಿದೆ ಎಂದು ಹೇಳುವ ವರದಿಯನ್ನು ಅರ್ಜಿಯಲ್ಲಿ ಉಲ್ಲೇಖ ಮಾಡಿದೆ.

(ಏಜೆನ್ಸೀಸ್)