ನವದೆಹಲಿ: ದೇಶದ ಗಡಿಭಾಗದಲ್ಲಿ ಈ ವರ್ಷ ನಡೆದ ಎನ್ಕೌಂಟರ್ಗಳು ಹಾಗೂ ಉಗ್ರರ ಹತ್ಯೆಗಳ ಅಂಕಿ-ಅಂಶ ಬಹಿರಂಗಗೊಂಡಿದ್ದು, ದೇಶದ ಸಶಸ್ತ್ರ ಪಡೆಗಳು ದೊಡ್ಡ ಸಂಖ್ಯೆಯಲ್ಲೇ ದೇಶದ್ರೋಹಿಗಳನ್ನು ಸದೆಬಡಿದಿದ್ದಾರೆ. ಈ ವರ್ಷದಲ್ಲಿ ಅಕ್ಟೋಬರ್ ವರೆಗೆ ನಡೆದ ಎನ್ಕೌಂಟರ್ ಮತ್ತು ಉಗ್ರರ ಹತ್ಯೆಗಳ ವಿವರ ಹೊರಬಿದ್ದಿದೆ.
ಲಭ್ಯ ಮಾಹಿತಿ ಪ್ರಕಾರ 2020ರಲ್ಲಿ ಜನವರಿಯಿಂದ ಅಕ್ಟೋಬರ್ ವರೆಗೆ ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ 200 ಉಗ್ರರನ್ನು ಯೋಧರು ಇನ್ನಿಲ್ಲವಾಗಿಸಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆ, ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಈ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದು, ಜೂನ್ನಲ್ಲಿ ಅತಿಹೆಚ್ಚು ಎಂದರೆ 49 ಉಗ್ರರನ್ನು ಬಲಿ ಪಡೆಯಲಾಗಿದೆ. ಏಪ್ರಿಲ್ನಲ್ಲಿ 28 ಹಾಗೂ ಜುಲೈ ಮತ್ತು ಅಕ್ಟೋಬರ್ನಲ್ಲಿ ತಲಾ 21 ಉಗ್ರರು ಹತರಾಗಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿ ಅತಿಹೆಚ್ಚು ಎನ್ಕೌಂಟರ್ಗಳಾಗಿದ್ದು, ಶೋಪಿಯನ್ ಮತ್ತು ಪುಲ್ವಾಮಾ ಎನ್ಕೌಂಟರ್ ಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿವೆ. ಪಾಕ್ ಸೇನಾ ಪಡೆ ಬೆಂಬಲಿತ ಹಿಜ್ಬುಲ್ ಮುಜಾಹಿದೀನ್ನ 72 ಉಗ್ರರು ಭಾರತದ ಸಶಸ್ತ್ರ ಪಡೆಗಳಿಂದ ಹತರಾಗಿದ್ದಾರೆ. ಹಾಗೇ ಎಲ್ಇಟಿನ 59, ಜೈಷೇ ಮಹಮೊದ್ನ 37 ಉಗ್ರರು ಹತರಾಗಿದ್ದಾರೆ. (ಏಜೆನ್ಸೀಸ್)