ನ್ಯೂಸ್

ನ್ಯೂಕ್​ ಇಂಡಿಯಾ, ಟ್ರಂಪ್​ ಕೊಲ್ಲು... ಅಮೆರಿಕ ಶಾಲೆಯಲ್ಲಿ ಗುಂಡಿನ ದಾಳಿ, ಶೂಟರ್​ ಬಂದೂಕಲ್ಲಿ ಶಾಕಿಂಗ್​ ಬರಹ! Minneapolis Shooter

Minneapolis Shooter : ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಭಾರಿ ಆತಂಕ ಸೃಷ್ಟಿಯಾಗಿದೆ. ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಲ್ಲಿರುವ ಕ್ಯಾಥೋಲಿಕ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ದುರಂತ ಸಾವಿಗೀಡಾಗಿದ್ದಾರೆ. ಮತ್ತೊಂದು ಆಘಾತಕಾರಿ ಸಂಗತಿ ಏನೆಂದರೆ, ದಾಳಿಕೋರನ ಶಸ್ತ್ರಾಸ್ತ್ರಗಳಲ್ಲಿ ಟ್ರಂಪ್​ರನ್ನು ಕೊಲ್ಲು ಮತ್ತು ನ್ಯೂಕ್​ ಇಂಡಿಯಾ (ಭಾರತವನ್ನು ನಾಶ ಮಾಡಿ) ಬರಹವಿದ್ದಿದ್ದು ಪತ್ತೆಯಾಗಿದೆ.

ಈ ಘಟನೆಯಲ್ಲಿ 17 ಮಂದಿಗೆ ಗಾಯಗಳಾಗಿವೆ. ಈ 17 ಮಂದಿಯಲ್ಲಿ 14 ವಿದ್ಯಾರ್ಥಿಗಳು. ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಕೋರನನ್ನು ರಾಬಿನ್​ ವೆಸ್ಟ್​ಮನ್ (23)​ ಎಂದು ಗುರುತಿಸಲಾಗಿದೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ವೆಸ್ಟ್‌ಮನ್ ಒಬ್ಬ ಮಹಿಳೆಯಾಗಿದ್ದಾಳೆ. ಆದರೆ, 2020ರಲ್ಲಿ ತನ್ನ ಮೂಲ ಹೆಸರಾದ ರಾಬರ್ಟ್‌ನಿಂದ ರಾಬಿನ್ ವೆಸ್ಟ್‌ಮನ್ ಎಂದು ಬದಲಾಯಿಸಿಕೊಂಡಿದ್ದಾಳೆ. ಮಿನ್ನಿಯಾಪೋಲಿಸ್‌ನಲ್ಲಿರುವ ಅನನ್ಸಿಯೇಷನ್ ​​ಕ್ಯಾಥೋಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾಗ ಬಣ್ಣದ ಗಾಜಿನ ಕಿಟಕಿಗಳ ಮೂಲಕ ಗುಂಡು ರಾಬಿನ್​ ಗುಂಡು ಹಾರಿಸಿದ್ದಾಳೆ.

ರೈಫಲ್, ಶಾಟ್‌ಗನ್ ಮತ್ತು ಪಿಸ್ತೂಲ್ ಎಂಬ ಮೂರು ಆಯುಧಗಳನ್ನು ಬಳಸಿ ಅನನ್ಸಿಯೇಷನ್ ​​ಕ್ಯಾಥೋಲಿಕ್ ಶಾಲೆಯ ಚರ್ಚ್ ಮೇಲೆ ಡಜನ್​ಗಟ್ಟಲೆ ಸುತ್ತು ಗುಂಡು ಹಾರಿಸಿದ್ದಾಳೆ. ಇದಾದ ನಂತರ ಆಕೆ, ಪಾರ್ಕಿಂಗ್ ಸ್ಥಳದಲ್ಲಿ ಸ್ವಯಂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾಳೆ.

ಈಕೆ "ರಾಬಿನ್ ಡಬ್ಲ್ಯೂ" ಎಂಬ ಶೀರ್ಷಿಕೆ ಅಡಿಯಲ್ಲಿ ಯೂಟ್ಯೂಬ್ ಚಾನೆಲ್​ ಕೂಡ ಹೊಂದಿದ್ದಳು. ಆ ಚಾನೆಲ್​ ಅನ್ನು ಡಿಲೀಟ್​ ಮಾಡುವ ಮುನ್ನ ಅದರಲ್ಲಿ ಕನಿಷ್ಠ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿತ್ತು.

ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಲಾದ ಸುಮಾರು 10 ನಿಮಿಷಗಳಷ್ಟು ಉದ್ದದ ವಿಡಿಯೋವೊಂದರಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಲೋಡೆಡ್​ ಮ್ಯಾಗಜಿನ್​ಗಳ ಸಂಗ್ರಹವನ್ನು ತೋರಿಸಿದೆ. ಆ ಮ್ಯಾಗಜಿನ್​ಗಳ ಮೇಲೆ "ಡೊನಾಲ್ಡ್ ಟ್ರಂಪ್​ರನ್ನು ಕೊಲ್ಲು", "ಈಗ ಟ್ರಂಪ್​ರನ್ನು ಕೊಲ್ಲು", "ಇಸ್ರೇಲ್ ಬೀಳಬೇಕು" ಮತ್ತು "ಇಸ್ರೇಲ್ ಅನ್ನು ಸುಟ್ಟುಹಾಕು" ಎಂದು ಬರೆಯಲಾಗಿದೆ. ಒಂದು ಆಯುಧದ ಮೇಲೆ "ನ್ಯೂಕ್ ಇಂಡಿಯಾ" ಎಂದೂ ಬರೆಯಲಾಗಿತ್ತು. "ನಿಮ್ಮ ದೇವರು ಎಲ್ಲಿದ್ದಾನೆ?" ಮತ್ತು "ಮಕ್ಕಳಿಗಾಗಿ" ಎಂದು ಸಹ ಮ್ಯಾಗಜಿನ್​ಗಳಲ್ಲಿ ಬರೆಲಾಗಿತ್ತು.

ಈ ಹಿಂದೆ ಶಾಲೆಗಳ ಮೇಲೆ ದಾಳಿ ಮಾಡಿದ ಶೂಟರ್‌ಗಳ ಹೆಸರುಗಳು ಕೂಡ ಮ್ಯಾಗಜೀನ್‌ನಲ್ಲಿ ಬರೆಯಲಾಗಿತ್ತು ಮತ್ತು ಕೆಲವು ಸಂದೇಶಗಳನ್ನು ಸಿರಿಲಿಕ್ ಭಾಷೆಯಲ್ಲಿ ಬರೆಯಲಾಗಿತ್ತು. ವಿಡಿಯೋದ ಒಂದು ಹಂತದಲ್ಲಿ, ಆ ವ್ಯಕ್ತಿಯು ಒಂದು ಸಣ್ಣ ಬಂದೂಕನ್ನು ಎತ್ತಿ ಹಿಡಿದುಕೊಂಡು, "ಇದು ನನಗಾಗಿ, ನನಗೆ ಅಗತ್ಯವಿದ್ದರೆ" ಎಂದು ಹೇಳಿದ್ದಾಳೆ.

ಇನ್ನು ಆ ಚಾನೆಲ್‌ನ ಎರಡನೇ ವಿಡಿಯೋ ಸುಮಾರು 20 ನಿಮಿಷಗಳಷ್ಟು ಉದ್ದವಾಗಿದ್ದು, ಎರಡು ವಿಭಿನ್ನ ಜರ್ನಲ್‌ಗಳನ್ನು ಒಳಗೊಂಡಿತ್ತು. ಮೊದಲನೆಯದು 150 ಕ್ಕೂ ಹೆಚ್ಚು ಪುಟಗಳನ್ನು ಹೊಂದಿದ್ದು, ಎಲ್ಲವನ್ನೂ ಸಿರಿಲಿಕ್ ವರ್ಣಮಾಲೆಯಂತೆ ಕಾಣುವ ಭಾಷೆಯಲ್ಲಿ ಬರೆಯಲಾಗಿದೆ. ಎರಡನೇ ಜರ್ನಲ್‌ನ ಕೊನೆಯ ಪುಟದಲ್ಲಿ 8-21-25 ದಿನಾಂಕವನ್ನು ಹೊಂದಿತ್ತು ಮತ್ತು ಆ ಜರ್ನಲ್​ 60ಕ್ಕೂ ಹೆಚ್ಚು ಪುಟಗಳನ್ನು ಹೊಂದಿತ್ತು ಮತ್ತು ಅದನ್ನು ಸಂಪೂರ್ಣವಾಗಿ ಸಿರಿಲಿಕ್‌ನಲ್ಲಿ ಬರೆಯಲಾಗಿದೆ.

ಯುಎಸ್ ಹೋಮ್​ಲ್ಯಾಂಡ್​ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ವಿಡಿಯೋದ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದಾರೆ. ಕೊಲೆಗಾರಳ ರೈಫಲ್ ಮ್ಯಾಗಜೀನ್‌ನಲ್ಲಿ 'ಮಕ್ಕಳಿಗಾಗಿ' ಮತ್ತು 'ನಿಮ್ಮ ದೇವರು ಎಲ್ಲಿದ್ದಾನೆ?' ಮತ್ತು 'ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲು' ಎಂಬ ಪದಗಳನ್ನು ಬರೆದಿದ್ದಳು ಎಂದು ಹೇಳಿದ್ದಾರೆ. ಅಲ್ಲದೆ, ಈ ಮಟ್ಟದ ಹಿಂಸೆಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಂದಹಾಗೆ, ಈ ವೆಸ್ಟ್‌ಮನ್ ಕಾನೂನುಬದ್ಧವಾಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದಳು ಮತ್ತು ಆಕೆಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಆಕೆ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ, ಮರುಕ ವ್ಯಕ್ತಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್​, ದೇಶದಲ್ಲಿ ಶೋಕಾಚರಣೆಯ ಸಂಕೇತವಾಗಿ ದೇಶಾದ್ಯಂತ ಅಮೆರಿಕದ ಧ್ವಜವನ್ನು ಅರ್ಧಕ್ಕೆ ಹಾರಿಸಲು ಆದೇಶಿಸಿದ್ದಾರೆ.

ಇನ್ನು ಇಂದು ಅನನ್ಸಿಯೇಷನ್ ​​ಕ್ಯಾಥೋಲಿಕ್ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಜನವರಿಯಿಂದ ದೇಶದಲ್ಲಿ ನಡೆದ 146ನೇ ಘಟನೆಯಾಗಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)