ನ್ಯೂಸ್

ಶಿಕ್ಷಣ ವಿರೋಧಿ ನೀತಿ ಖಂಡಿಸಿ ಎನ್‌ಎಸ್‌ಯುಐ ಪ್ರತಿಭಟನೆ

ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಎನ್‌ಎಸ್‌ಯುಐ ಪದಾಧಿಕಾರಿಗಳು ಶನಿವಾರ ನಗರದ ಮಹಾವೀರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಸೈನ್ಸ್ ಮೈದಾನದಿಂದ ಎನ್‌ಎಸ್‌ಯುಐ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಮಹಾವೀರವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಕೈಬಿಡಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಇದೇ ರೀತಿ ಶಿಕ್ಷಣ ವಿರೋಧಿ ನೀತಿ ಮುಂದುವರಿಸಿದರೆ ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆ ಬಳಿಕ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್ ಮಾತನಾಡಿ, ಕೂಡಲೇ ಸ್ಥಗಿತಗೊಳಿಸಿರುವ ಪದವಿ ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಯೋಜನೆ ಜಾರಿಗೊಳಿಸಬೇಕು. 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಪುನಾರಂಭಿಸಬೇಕು. ಗ್ರಾಮಾಂತರ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿಸ್ತರಣೆ, ವಸತಿ ಶಾಲೆಗಳ ಸಮಸ್ಯೆ ಸರಿಪಡಿಸಬೇಕು. ವಾರ್ಷಿಕ ಪ್ರವೇಶ ಶುಲ್ಕ ಹೆಚ್ಚಳ ರದ್ದುಪಡಿಸಬೇಕು. ಪರೀಕ್ಷೆ ಫಲಿತಾಂಶದಲ್ಲಿ ವಿಳಂಬ ಮಾಡದೆ ಪ್ರಸ್ತುತ ಸಾಲಿನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಎಸ್.ಪಿ.ದಿನೇಶ್, ರವಿ ಕಾಟಿಕೆರೆ, ಚರಣ್, ಹರ್ಷಿತ್, ಚಂದ್ರೋಜಿ ರಾವ್, ವರುಣ್ ಪಂಡಿತ್, ರವಿ, ಶಿವು, ಉಲ್ಲಾಸ್, ಪ್ರದೀಪ್, ಸಾಗರ್, ಶಶಿಕುಮಾರ್, ಗಿರೀಶ್, ವಿಶಾಲ್, ತೌಫಿಕ್, ದೇವು, ಸುಹಾಸ್, ಕುಮಾರ್, ಪ್ರಸನ್ನ, ಅಭಿ, ಪ್ರದೀಪ್, ನರೇಂದ್ರ, ಮಲಗೊಪ್ಪ ಶಿವು, ಧನರಾಜ್, ಗೌತಮ್, ಹೇಮಂತ್, ಬಸವರಾಜ್, ಪುರಲೆ ವೆಂಕಟೇಶ್, ಅಭಿ ಹಾಗೂ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.