ನ್ಯೂಸ್

ಯೂಟ್ಯೂಬರ್ ಪ್ರಿಯಕರನಿಗಾಗಿ ಪತಿಯನ್ನೇ ಕೊಂದು ಚರಂಡಿಗೆ ಎಸೆದ ಇನ್​ಸ್ಟಾಗ್ರಾಂ ಹುಚ್ಚು ಹಿಡಿದ ಪತ್ನಿ| YouTuber

YouTuber | ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​​ ಮಾಡ್ತಾ ಪರಿಚಯವಾದ ಪ್ರಿಯಕರನಿಗಾಗಿ ಪತಿಯನ್ನೇ ದುಪಟ್ಟಾದಿಂದ ಕತ್ತು ಹಿಸುಕಿ ಕೊಂದ ಘಟನೆ ಹರಿಯಾಣದಲ್ಲಿ ನಡೆದಿದೆ. ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಈ ಇಬ್ಬರು ಪ್ರೇಮಿಗಳು ಜೊತೆಯಾಗಿ ಇರುವಾಗ ಆಕೆಯ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾರೆ. ನಂತರ ಅವರಿಬ್ಬರು ಸೇರಿ ಪತಿಯನ್ನು ಕತ್ತು ಹಿಸುಕಿ ಕೊಂದಿದ್ದಾರೆ.

ಇನ್‌ಸ್ಟಾಗ್ರಾಮ್​​ನಲ್ಲಿ 32 ವರ್ಷದ ರವೀನಾ ಮತ್ತು ಸುರೇಶ್​​ಗೆ ಪರಿಚಯವಾಯಿತು. ಈ ಸುರೇಶ್​ ಯೂಟ್ಯೂಬರ್​ ಕೂಡ ಹೌದು. ಪರಿಚಯವಾದ ನಂತರ ಇವರು ಹರಿಯಾಣದ ಪ್ರೇಮ್‌ನಗರದಲ್ಲಿ ಒಟ್ಟಿಗೆ ಸಣ್ಣ ವಿಡಿಯೋಗಳನ್ನು ಮಾಡಲು ಪ್ರಾರಂಭಿಸಿದರು. ಆಕೆಯ ಪತಿ ಪ್ರವೀಣ್ ಮತ್ತು ಅವರ ಕುಟುಂಬದವರು ಇದಕ್ಕೆ ಒಪ್ಪದಿದ್ದರೂ ಸುಮಾರು ಒಂದೂವರೆ ವರ್ಷಗಳ ಕಾಲ ಒಟ್ಟಿಗೆ ರೀಲ್ಸ್​​​ ಮಾಡಿದ್ದರು.

ಸಣ್ಣ ವಿಡಿಯೋಗಳು ಮತ್ತು ಡಾನ್ಸ್​​​ ರೀಲ್ಸ್​​​ಗಳ ಮೂಲಕ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 34,000 ಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದರು. ವಿಡಿಯೋಗಳನ್ನು ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ರವೀನಾ ಅವಳ ಕುಟುಂಬದ ಬಲವಾದ ವಿರೋಧದ ಹೊರತಾಗಿಯೂ ವಿಡಿಯೋ ಮಾಡುವುದನ್ನು ಮುಂದುವರೆಸಿದಳು. ಈ ವಿಷಯದ ಬಗ್ಗೆ ತನ್ನ ಪತಿಯೊಂದಿಗೆ ಜಗಳವಾಡಿದ್ದಳು.

ಮಾರ್ಚ್ 25ರಂದು, ಆಕೆಯ ಪತಿ ಪ್ರವೀಣ್ ಅವರಿಬ್ಬರೂ ಒಟ್ಟಾಗಿ ಇರುವುದನ್ನು ನೋಡಿ ಜಗಳವಾಡಿದ್ದಾನೆ. ಆ ನಂತರ ರವೀನಾ ಮತ್ತು ಸುರೇಶ್ ದುಪಟ್ಟಾದಿಂದ ಅವನ ಕುತ್ತಿಗೆ ಹಿಸುಕಿ ಕೊಂದಿದ್ದಾರೆ. ಅವನ ಕುಟುಂಬದವರು ಪ್ರವೀಣ್ ಎಲ್ಲಿದ್ದಾನೆಂದು ವಿಚಾರಿಸಿದಾಗ ರವೀನಾ ಗೊತ್ತಿಲ್ಲದಂತೆ ನಟಿಸಿದ್ದಾಳೆ.

ಬೆಳಗಿನ ಜಾವ 2:30 ರ ಸುಮಾರಿಗೆ ಪ್ರವೀಣ್ ಶವವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ರವೀನಾ ಮನೆಯಿಂದ ಆರು ಕಿಮೀ ದೂರದಲ್ಲಿರುವ ದಿನ್ನೋಡ್ ರಸ್ತೆಯ ಚರಂಡಿಯಲ್ಲಿ ಎಸೆದಿದ್ದಾರೆ. ಮಾರ್ಚ್ 28 ರಂದು ಸದರ್ ಪೊಲೀಸರು ಪ್ರವೀಣ್ ದೇಹವನ್ನು ಕೊಳೆತ ಸ್ಥಿತಿಯಲ್ಲಿ ಪತ್ತೆ ಮಾಡಿದ್ದಾರೆ.

ಆಕೆಯ ಮನೆಗೆ ಹೋಗುವ ರಸ್ತೆಯ ಸಿಸಿಟಿವಿ ದೃಶ್ಯಗಳಲ್ಲಿ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಒಬ್ಬ ವ್ಯಕ್ತಿ ಜೊತೆಗೆ ಮತ್ತು ಮುಖ ಮುಚ್ಚಿಕೊಂಡು ಹಿಂಬದಿ ಸವಾರ ಹಾಗೂ ಮಧ್ಯದಲ್ಲಿ ಪ್ರವೀಣ್ ಮೃತದೇಹ ಇರುವುದು ಕಂಡುಬಂದಿದೆ. ಸುಮಾರು ಎರಡು ಗಂಟೆಗಳ ನಂತರ ಅದೇ ಸವಾರರು ಅದೇ ಬೈಕ್‌ನಲ್ಲಿ ಕುಳಿತು ವಾಪಾಸ್​​​ ತೆರಳಿದ್ದಾರೆ. ಆದರೆ ಆಗ ಮಧ್ಯದಲ್ಲಿರುವ ಪ್ರವೀಣ್​​​ ಶವ ಕಾಣೆಯಾಗಿತ್ತು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ರವೀನಾ ಮತ್ತು ಸುರೇಶ್ ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ. ರವೀನಾ ಮತ್ತು ಪ್ರವೀಣ್​ನ ಆರು ವರ್ಷದ ಮಗನು ಈಗ ತನ್ನ ಅಜ್ಜ ಸುಭಾಷ್ ಮತ್ತು ಚಿಕ್ಕಪ್ಪ ಸಂದೀಪ್ ಜೊತೆಯಲ್ಲಿದ್ದಾನೆ.