ನ್ಯೂಸ್

ಸೇವಾ ಮನೋಭಾವ ಬೆಳೆಸುವ ಎನ್‌ಎಸ್‌ಎಸ್

ಎ. ಆರ್. ರಘುರಾಮ
  • ಪಿರಿಯಾಪಟ್ಟಣ : ಯಾವುದೇ ಪ್ರತಿಫಲ ನಿರೀಕ್ಷಿಸದೆ ಸಮಾಜ ಸೇವೆ ಮಾಡುವ ಮನೋಭಾವ ಬೆಳೆಸಲು ಎನ್‌ಎಸ್‌ಎಸ್ ಶಿಬಿರಗಳು ಸಹಕಾರಿ ಎಂದು ವಕೀಲ ಹಾಗೂ ಪಿರಿಯಾಪಟ್ಟಣ ರೋಟರಿ ಐಕಾನ್ಸ್‌ನ ನಿಯೋಜಿತ ಅಧ್ಯಕ್ಷ ಜೆ.ಎಸ್.ನಾಗರಾಜ್ ಅಭಿಪ್ರಾಯಪಟ್ಟರು.
    ರಾಷ್ಟ್ರೀಯ ಸೇವಾ ಯೋಜನೆಯಡಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಆಯೋಜಿಸಿರುವ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಶಿಕ್ಷಣದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ನಿರ್ದಿಷ್ಟ ಗುರಿಯೊಂದಿಗೆ ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಯಶಸ್ಸು ಗಳಿಸಬಹುದು. ಚಂಚಲತೆಯ ಮನಸ್ಸಿನಿಂದ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಒಮ್ಮೆ ಕಳೆದು ಹೋದ ಸಮಯ ಹಿಂದಿರುಗಿ ಬರುವುದಿಲ್ಲ ಎಂದು ಕಿವಿಮಾತು ಹೇಳಿದರು.
    ಹೆಣ್ಣು ಮಕ್ಕಳ ರಕ್ಷಣೆಗಾಗಿಯೇ ಪೋಕ್ಸೋ ಕಾಯ್ದೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಾಯ್ದೆಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಸಾಮಾನ್ಯ ಅರಿವು ಹೊಂದಬೇಕು ಎಂದು ಇದೇ ವೇಳೆ ತಿಳಿಸಿದರು.
    ರೋಟರಿ ಐಕಾನ್ಸ್‌ನ ಅಧ್ಯಕ್ಷ ಕೆ.ರಮೇಶ್ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದುಡಿಮೆ ಎಂಬುದು ಪ್ರತಿನಿತ್ಯವೂ ಇರುತ್ತದೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿದ್ದಲ್ಲಿ ಹೆಚ್ಚಿನ ತೊಂದರೆಗಳು ಎದುರಾಗುವ ಸಾಧ್ಯತೆ ಇವೆ ಎಂದರು.
    ಯಾವುದೇ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದರು.