ಲಖನೌ: ಕರೊನಾ ಸೋಂಕಿಗೆ ಶುಶ್ರೂಷೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ತಬ್ಲಿಘಿ ಜಮಾತ್ ಸದಸ್ಯರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಲು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಗಾಜಿಯಾಬಾದ್ನಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಬೆನ್ನಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆಂದು ಕಂಡುಬಂದ ಆರೋಪಿಗಳನ್ನು ವರ್ಷದ ಅವಧಿಗೆ ಯಾವುದೇ ಕಾರಣ ನೀಡಿದೆ ಬಂಧನದಲ್ಲಿ ಇರಿಸಿಕೊಳ್ಳಲು ಎನ್ಎಸ್ಎ ಅಡಿ ಅವಕಾಶ ಇದೆ.
ಆಸ್ಪತ್ರೆಯಲ್ಲಿ ನಡೆದದ್ದೇನು?: ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 6 ಮಂದಿಯನ್ನು ಗಾಜಿಯಾಬಾದ್ನ ಎಂಎಂಜಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸುರಕ್ಷತೆ ನಿಯಮ ಉಲ್ಲಂಘಿಸುತ್ತಿದ್ದ ಇವರಿಗೆ ವೈದ್ಯಕೀಯ ಸಿಬ್ಬಂದಿ ಪದೇ ಪದೆ ಎಚ್ಚರಿಕೆ ನೀಡುತ್ತಿದ್ದರೂ, ಲೆಕ್ಕಿಸದೆ ಸಿಬ್ಬಂದಿಯ ಜತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದಾಡಿದರು. ಅಸಭ್ಯ ವರ್ತನೆ ತೋರಿದರು. ವಾರ್ಡ್ಗಳಲ್ಲಿ ನಗ್ನವಾಗಿ ಓಡಾಡತೊಡಗಿದರು. ಬೀಡಿ, ಸಿಗರೇಟ್ ನೀಡುವಂತೆ ಪೀಡಿಸತೊಡಗಿದರು.
ಕೆಲವರು ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಯನ್ನೂ ಮಾಡಿದರು. ಈ ಬಗ್ಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗೆ (ಸಿಎಂಒ) ಹಲ್ಲೆಗೊಳಗಾದ ಸಿಬ್ಬಂದಿ ದೂರು ನೀಡಿದ್ದಾರೆ. ಇದರ ಆಧಾರದ ಸಿಎಂಒ ಪೊಲೀಸರಲ್ಲಿ ದೂರು ದಾಖಲಿಸಿದರು. ಈಗ ಇವರ ವಿರುದ್ಧ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೆಹಲಿಯ ಹಜರತ್ ನಿಜಾಮುದ್ದೀನ್ನಲ್ಲಿ ನಡೆದ ತಬ್ಲಿಘಿ ಜಮಾತ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 136 ಜನರನ್ನು ಗುರುತಿಸಲಾಗಿದ್ದು, ಇವರಲ್ಲಿ ಆರು ಮಂದಿಯಲ್ಲಿ ಸೋಂಕಿನ ಲಕ್ಷಣ ಗೋಚರಿಸಿದ ಕಾರಣ ಅವರನ್ನು ಐಸೋಲೇಷನ್ ವಾರ್ಡ್ನಲ್ಲಿ ಇರಿಸಲಾಯಿತು.
ಈ ಪೈಕಿ ಒಬ್ಬನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಅನುಚಿತ ವರ್ತನೆ, ಹಲ್ಲೆ ಹಿನ್ನೆಲೆಯಲ್ಲಿ ಈ ಸದಸ್ಯರ ಇರುವ ಕ್ವಾರಂಟೈನ್ ಮತ್ತು ಐಸೋಲೇಷನ್ ವಾರ್ಡ್ಗಳಿಗೆ ಮಹಿಳಾ ಸಿಬ್ಬಂದಿ ನಿಯೋಜಿಸದಂತೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಇಂಥ ಜನರಿರುವ ವಾರ್ಡ್ಗಳಿಗೆ ಪುರುಷ ನರ್ಸ್, ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿ ಮಾತ್ರ ನಿಯೋಜಿಸಬೇಕು ಎಂದು ಸೂಚಿಸಲಾಗಿದೆ.
ಕಾನೂನು ಪಾಲಿಸದವರು, ಸರ್ಕಾರಿ ಆದೇಶ ಧಿಕ್ಕರಿಸುವವರು ಮಾನವೀಯತೆಯ ಶತ್ರುಗಳು. ಶುಶ್ರೂಷಕಿಯರ ಮೇಲೆ ಅವರು ನಡೆಸಿದ ಕೃತ್ಯ ಅತ್ಯಂತ ಹೀನ ಅಪರಾಧ. ಈ ದುರುಳರನ್ನು ಸುಮ್ಮನೆ ಬಿಡುವುದಿಲ್ಲ. | ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿ https://www.vijayavani.net/earth-quake-in-kr-nagara-and-arakalagudu/