ನ್ಯೂಸ್

ರಾಮಮಂದಿರ ಟ್ರಸ್ಟ್​ ವಿಶ್ವಸ್ಥರ ಪಟ್ಟಿ ವಿಚಾರದಲ್ಲಿ ಮಹಾಂತ ನೃತ್ಯಗೋಪಾಲ ದಾಸ್ ಅಪ್​ಸೆಟ್​:3 ಗಂಟೆಗೆ ಸಂತರ ಸಭೆ,5 ಗಂಟೆಗೆ ಪತ್ರಿಕಾ ಗೋಷ್ಠಿಗೆ ಚಿಂತನೆ ನಡೆಸಿ ಕ್ಯಾನ್ಸಲ್ ಮಾಡಿದ್ದೇಕೆ?!

ಅಯೋಧ್ಯಾ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ವಿಶ್ವಸ್ಥರ ಮಂಡಳಿಗೆ ತಮ್ಮನ್ನು ಸೇರಿಸಿಲ್ಲ ಎಂದು ರಾಮ ಜನ್ಮಭೂಮಿ ನ್ಯಾಸದ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ.

ಪರಿಣಾಮ, ರಾಜ್ಯ ಬಿಜೆಪಿ ವರಿಷ್ಠರ ಆದೇಶದ ಮೇರೆಗೆ ಅಯೋಧ್ಯೆಯ ಶಾಸಕ ಬಿಜೆಪಿಯ ವೇದ ಪ್ರಕಾಶ್ ಗುಪ್ತಾ, ಮೇಯರ್ ರಿಷಿಕೇಶ್ ಉಪಾಧ್ಯಾಯ್, ಅಯೋಧ್ಯೆ ಮಹಾನಗರ ಅಧ್ಯಕ್ಷ ಅಭಿಷೇಕ್ ಮಿಶ್ರಾ ಅವರು ಅಯೋಧ್ಯೆಯ ಮಣಿರಾಮದಾಸ್ ದೇವಸ್ಥಾನಕ್ಕೆ ಆಗಮಿಸಿ, ಮಹಾಂತರ ಜತೆಗೆ ಮಾತುಕತೆ ನಡೆಸಲು ತೆರಳಿದ್ದರು. ಆದರೆ ಅವರ ಪ್ರಯತ್ನ ವಿಫಲವಾಗಿದೆ.

ದೇವಸ್ಥಾನ ಪ್ರವೇಶಿಸದಂತೆ ಈ ನಿಯೋಗವನ್ನು ತಡೆದ ಮಹಾಂತರು, ಅವರಿಗೆ ಸ್ಥಳಬಿಟ್ಟು ಹಿಂದಿರುಗುವಂತೆ ಸೂಚಿಸಿದ್ದಾರೆ. ಅಲ್ಲದೆ,ಅಪರಾಹ್ನ 3 ಗಂಟೆಗೆ ಸಂತರ ಸಭೆ ಕರೆದಿರುವ ಮಹಾಂತರು, ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲು ಚಿಂತನೆ ನಡೆಸಿದ್ದರು. ಆದೆ, ಮಹಾಂತರ ಉತ್ತರಾಧಿಕಾರಿ ಕಮಲ್ ನಯನ್ ದಾಸ್ ಅವರಿಗೆ ಗೃಹ ಸಚಿವಾಲಯದಿಂದ ಕರೆ ಬಂದ ಹಿನ್ನೆಲೆಯಲ್ಲಿ ಈ ಸಭೆ, ಪತ್ರಿಕಾಗೋಷ್ಠಿಗಳು ಕ್ಯಾನ್ಸಲ್ ಆಗಿವೆ ಎಂದು ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವೇದ ಪ್ರಕಾಶ್ ಗುಪ್ತಾ ನೀಡಿರುವ ಮಾಹಿತಿ ಪ್ರಕಾರ, ಟ್ರಸ್ಟ್​ನಲ್ಲಿ ಇನ್ನೂ ಮೂರು ಸ್ಥಾನಗಳು ಬಾಕಿ ಇವೆ.ಅದರಲ್ಲಿ ಮಹಾಂತ ಅವರನ್ನೂ ಸೇರಿಸಬಹುದೆಂಬ ಆಶ್ವಾಸನೆ ನೀಡಲಾಗಿದೆ. ಈ ಬಗ್ಗೆ ಅಮಿತ್ ಷಾ ಮತ್ತು ಮಹಾಂತರ ನಡುವೆ ದೂರವಾಣಿ ಸಂಭಾಷಣೆ ನಡೆದಿತ್ತು. ಲಖನೌನಿಂದಲೂ ಮಹಾಂತ ಅವರಿಗೆ ದೂರವಾಣಿ ಕರೆ ಬಂದಿತ್ತು. (ಏಜೆನ್ಸೀಸ್)