ನ್ಯೂಸ್

ನರೇಗಾ ಮಹಿಳಾ ಕೂಲಿ ಕಾರ್ಮಿಕರಿಗೆ ಕಿರುಕುಳ

ಎಂ.ರವಿ

ಕಿಕ್ಕೇರಿ: ಸಮೀಪದ ಮಂದಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕಾರ್ಮಿಕರು ಕೆಲಸ ಮಾಡುವಾಗ ಕೆಲ ಕಿಡಿಗೇಡಿಗಳು ಹಿಂಸೆ ನೀಡುತ್ತಿದ್ದಾರೆ ಎಂದು ಕೂಲಿ ಕಾರ್ಮಿಕರು ದೂರಿದ್ದಾರೆ.

ಮಂದಗೆರೆ ಗ್ರಾಪಂ ಅಧಿಕಾರಿಗಳಲ್ಲಿ ತಮ್ಮ ವೇದನೆಯನ್ನು ತೋಡಿಕೊಂಡ ಕೂಲಿ ಕಾರ್ಮಿಕರು, ಬೇವಿನಹಳ್ಳಿ ಅಮಾನಿ ಕೆರೆಯಲ್ಲಿ ಊಳು ತೆಗೆಯಲು ಬಹುತೇಕ ಮಹಿಳಾ ಕೂಲಿ ಕಾರ್ಮಿಕರು ಕಳೆದೆರಡು ದಿನಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಈ ಕೂಲಿ ಕೆಲಸವೇ ಬದುಕಿಗೆ ಆಧಾರವಾಗಿದೆ. ಈ ಕಾರ್ಮಿಕರು ಕೆಲಸ ಮಾಡುವುದನ್ನು ಹಲವು ಕಿಡಿಗೇಡಿಗಳು ಡ್ರೋನ್ ಮೂಲಕ ವಿಡಿಯೋ ಮಾಡುವುದು, ಬಹಿರ್ದೆಸೆಗೆ ಹೋಗುವಾಗ ವಿಡಿಯೋ ಮಾಡುವುದು ಮತ್ತಿತರ ರೀತಿ ತೊಂದರೆ ನೀಡುತ್ತಿದ್ದಾರೆ ಎಂದರು.

ಈ ಕೂಲಿ ಕಾರ್ಮಿಕರ ಮೇಟಿಯಾಗಿ(ಮುಖ್ಯಸ್ಥ) ಪವಿತ್ರಾ, ಗೋಪಾಲ್ ಉಸ್ತುವಾರಿಯಾಗಿದ್ದು ಕೂಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಅವಶ್ಯವಾಗಿದೆ. ಕಾರ್ಮಿಕರು ನಿರ್ಭಯವಾಗಿ ಕೆಲಸ ಮಾಡಲು ಸೂಕ್ತ ರಕ್ಷಣೆ ನೀಡಿ, ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಗೋಪಾಲ್, ಪವಿತ್ರಾ, ಕಾಂತಾಮಣಿ, ಕಾವ್ಯಾ, ರಾಧಾ, ಪಾರ್ವತಮ್ಮ, ನೀಲಮ್ಮ, ಗಿಡ್ಡಮ್ಮ, ಯಶೋದಾ, ಪುಟ್ಟಮ್ಮ, ಸಾಕಮ್ಮ ಮತ್ತಿತರರಿದ್ದರು.

ಕಿಕ್ಕೇರಿ ಸಮೀಪದ ಮಂದಗೆರೆ ಗ್ರಾಪಂ ವ್ಯಾಪ್ತಿಯ ಬೇವಿನಹಳ್ಳಿ ಅಮಾನಿ ಕೆರೆಯಲ್ಲಿ ಕೆಲಸ ಮಾಡುವ ನರೇಗಾ ಮಹಿಳಾ ಕೂಲಿ ಕಾರ್ಮಿಕರಿಗೆ ತೊಂದರೆ ನೀಡುತ್ತಿರುವ ಕಿಡಿಗೇಡಿಗಳಿಂದ ಸೂಕ್ತ ರಕ್ಷಣೆ ನೀಡುವಂತೆ ಕೂಲಿ ಕಾರ್ಮಿಕರು ಗ್ರಾಪಂ ಅಧಿಕಾರಿಗಳಲ್ಲಿ ಒತ್ತಾಯಿಸಿದರು. ಗೋಪಾಲ್, ಪವಿತ್ರಾ, ಕಾಂತಾಮಣಿ, ಕಾವ್ಯಾ, ರಾಧಾ, ಪಾರ್ವತಮ್ಮ, ನೀಲಮ್ಮ, ಗಿಡ್ಡಮ್ಮ, ಯಶೋದಾ, ಪುಟ್ಟಮ್ಮ, ಸಾಕಮ್ಮ ಮತ್ತಿತರರಿದ್ದರು.