ಬೆಂಗಳೂರು: ಬಿಜೆಪಿ, ಜೆಡಿಎಸ್ 20-20 ಸರ್ಕಾರದ ವೇಳೆ ಎನ್‌ಪಿಎಸ್ ಜಾರಿಗೆ ತರಲಾಯಿತು. ಬಳಿಕ 19 ಸಾವಿರ ಎನ್‌ಪಿಎಸ್ ನೌಕರರನ್ನು ಓಪಿಎಸ್ ನೌಕರರನ್ನಾಗಿ ಪರಿಗಣಿಸಲಾಗಿದೆ. ಮಿಕ್ಕವರನ್ನು ಮುಂದಿನ ದಿನಗಳಲ್ಲಿ ಹಳೇ ಪಿಂಚಣಿ ವ್ಯವಸ್ಥೆ ವ್ಯಾಪ್ತಿಗೆ ತರಲಾಗುವುದು, ಈ ವಿಚಾರದಲ್ಲಿ ಸಿದ್ದರಾಮಯ್ಯ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕಾಂಗ್ರೆಸ್ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಮತ್ತು ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮಂಜೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖ್ಯಮಂತ್ರಿಗಳಿಂದ 7ನೇ ವೇತನ ಆಯೋಗ ಜಾರಿಗೆ ತರಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ 7ನೇ ವೇತನ ಆಯೋಗದ ವರದಿ ತರಿಸಿಕೊಂಡಿದ್ದು ಚುನಾವಣೆ ನಂತರ ಜಾರಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
2014 ರಲ್ಲಿ ಸಿದ್ದರಾಮಯ್ಯ ಸರ್ಕಾರ 6 ನೇ ವೇತನ ಆಯೋಗ ರಚನೆ ಮಾಡಿ ಸರ್ಕಾರಿ ನೌಕರರ ಪರವಾಗಿ ನಿಂತರು. ಶಿಕ್ಷಕರು ಸೇರಿದಂತೆ ಎಲ್ಲಾ ನೌಕರರಿಗೆ ಶೇ.30 ರಷ್ಟು ಸಂಬಳ ಹೆಚ್ಚು ಮಾಡಿದ ಕಾರಣಕ್ಕೆ ಅನೇಕ ಶಿಕ್ಷಕರು ಕಾಂಗ್ರೆಸ್ ಪರವಾಗಿ ನಿಲ್ಲಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಸಾಕಷ್ಟು ಕೊಡುಗೆ ಕೊಟ್ಟಿದೆ. 11,494 ಶಿಕ್ಷಕರ ಹುದ್ದೆ, 35 ಸಾವಿರ ಅತಿಥಿ ಶಿಕ್ಷಕರ ಹುದ್ದೆ, ಶಾಲಾ ಕೊಠಡಿಗಳ ದುರಸ್ಥಿಗೆ 70 ಕೋಟಿ ಅನುದಾನ, ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ನೀಡುವ ಸಲುವಾಗಿ 280 ಕೋಟಿ ಅನುದಾನ. 143 ಕೋಟಿ ವೆಚ್ಚದಲ್ಲಿ ಎರಡು ಜತೆ ಸಮವಸ್ತ್ರ, ವಿಶ್ವವಿದ್ಯಾನಿಲಯಗಳಿಗೆ 350 ಕೋಟಿ ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆ 5 ರಿಂದ 8 ಸಾವಿರ ಸಂಬಳ ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ. 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಹಿಡಿಗಂಟನ್ನು ನೀಡುವ ಹೊಸ ಯೋಜನೆ ಜಾರಿಗೆ ತಂದಿದೆ ಎಂದು ವಿವರಣೆ ನೀಡಿದರು.
ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಕಾರ್ಯದರ್ಶಿ ಮಾಲತೇಶ್ ಅಣ್ಣಿಗೇರಿ ಮುಖಂಡರಾದ ಎ.ಸಿ.ಹರಿಪ್ರಸಾದ್, ಘೋರ್ಪಡೆ ಉಪಸ್ಥಿತರಿದ್ದರು.