ನ್ಯೂಸ್

ಇನ್ಮುಂದೆ ರೈಲಿನಲ್ಲೂ ಹಣ ಡ್ರಾ ಮಾಡಬಹುದು! ATM ಸೇವೆ ಹೊಂದಿರುವ ಮೊದಲ ರೈಲು ಇದೇ ನೋಡಿ; ATM

ATM: ಪ್ರಯಾಣಿಕರ ಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಈಗಾಗಲೇ ಸಾಕಷ್ಟು ವಿನೂತನ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಇದೀಗ ಇದೇ ಮೊದಲ ಬಾರಿಗೆ ರೈಲಿನಲ್ಲಿ ATM ಅಳವಡಿಸಿದೆ. ಇದೇ ಮೊದಲ ಬಾರಿಗೆ ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್, ಭಾರತದಲ್ಲಿ ಎಟಿಎಂ ಅಳವಡಿಸಿದ ಮೊದಲ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರೈಲಿನ ಹವಾನಿಯಂತ್ರಿತ ಕೋಚ್‌ನಲ್ಲಿ ಎಟಿಎಂಅನ್ನು ಸ್ಥಾಪಿಸಲಾಗಿದ್ದು, ಅದರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ರೈಲ್ವೆಯ ಭೂಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದ ನಡುವಿನ ಸಹಭಾಗಿತ್ವದಲ್ಲಿ INFRIS ಯೋಜನೆ ಅಡಿಯಲ್ಲಿ ರೈಲಿನಲ್ಲಿ ATM ಅನ್ನು ಅಳವಡಿಸಲಾಗಿದೆ. ಇದರ ಫಲಿತಾಂಶಗಳು ಉತ್ತಮವಾಗಿದ್ದು, ಇದರಿಂದ ಪ್ರಯಾಣಿಕರಿಗೆ ರೈಲಿನಲ್ಲಿ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಭೂಸಾವಲ್‌ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಇಟಿ ಪಾಂಡೆ ತಿಳಿಸಿದ್ದಾರೆ.

ಈ ಯಂತ್ರವು ರೈಲು ಚಲಿಸುತ್ತಿರುವಾಗಲೂ ಪ್ರಯಾಣಿಕರು ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಇದನ್ನು ಭಾರತೀಯ ರೈಲ್ವೆಯ ಶುಲ್ಕ ರಹಿತ ಆದಾಯ ಯೋಜನೆಯ ಭಾಗವಾಗಿ ಪರಿಚಯಿಸಲಾಗಿದೆ.

ಎಟಿಎಂ ಅನ್ನು ಪಂಚವಟಿ ಎಕ್ಸ್​ಪ್ರೆಸ್​ನ ಎಲ್ಲಾ 22 ಬೋಗಿಗಳಲ್ಲಿನ ಪ್ರಯಾಣಿಕರು ಇದನ್ನು ಬಳಸಬಹುದು. ನಗದು ಡ್ರಾ ಮಾಡುವುದು ಮಾತ್ರವಲ್ಲದೇ ಪ್ರಯಾಣಿಕರು ಚೆಕ್ ಪುಸ್ತಕಗಳನ್ನು ಆರ್ಡರ್ ಮಾಡಲು ಮತ್ತು ಖಾತೆ ಸ್ಟೇಟ್​ಮೆಂಟ್​ಗಳನ್ನು ಪಡೆಯಲು ಈ ಎಟಿಎಂ ಬಳಸಬಹುದಾಗಿದೆ. ಈ ಎಟಿಎಂಗೆ ದಿನದ 24 ಗಂಟೆಯೂ ಸಿಸಿಟಿವಿ ಕ್ಯಾಮೆರಾಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ಸೌಲಭ್ಯ ಪ್ರಯಾಣಿಕರಲ್ಲಿ ಜನಪ್ರಿಯವಾದರೆ ಸೇವೆಯನ್ನು ಮತ್ತಷ್ಟು ರೈಲುಗಳಿಗೆ ವಿಸ್ತರಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

(ಏಜೆನ್ಸೀಸ್)

ದಾದರ್, ಕಲ್ಯಾಣ್, ಇಗತ್ಪುರಿ ಮತ್ತು ನಾಶಿಕ್​ನಂತಹ ಪ್ರಮುಖ ನಿಲ್ದಾಣಗಳಲ್ಲಿ ಪಂಚವಟಿ ಎಕ್ಸ್‌ಪ್ರೆಸ್ ನಿಗದಿತ ನಿಲುಗಡೆಯನ್ನು ಹೊಂದಿದೆ. ಮುಂಬೈಯನ್ನು ಉತ್ತರ ಮಹಾರಾಷ್ಟ್ರದೊಂದಿಗೆ ಸಂಪರ್ಕಿಸುವ ಪ್ರಯಾಣಿಕರಿಗೆ ಇದು ನಿರ್ಣಾಯಕ ಇಂಟರ್‌ಸಿಟಿ ಸೇವೆಯಾಗಿದೆ. ಜೊತೆಗೆ ಈ ರೈಲಿನಲ್ಲಿ ಮುಂಬೈ-ನಾಸಿಕ್ ಕಾರಿಡಾರ್‌ನ ಆಚೆಗೆ ಪ್ರಯಾಣಿಸುವ ದೂರದ ಪ್ರಯಾಣಿಕರಿಗೆ ಎಟಿಎಂ ಸೌಲಭ್ಯ ಲಭ್ಯವಿರುತ್ತದೆ.