ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಆದರೆ, ಬೆಳಗಾವಿ ಲೋಕಸಭೆ, ಹಾಗೂ ರಾಜ್ಯದ ಮಸ್ಕಿ, ಬಸವಕಲ್ಯಾಣ ಹಾಗೂ ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೆ ಇನ್ನೂ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿಲ್ಲ.
ದೇಶದ ಕೆಲವು ಇನ್ನೂ ಕೆಲವು ಕಡೆ ಲೋಕಸಭೆ ಹಾಗೂ ವಿಧಾನಸಭೆಗಳ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಅದಕ್ಕಾಗಿ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದರು. ಈ ಎಲ್ಲ ರಾಜ್ಯಗಳ ಚುನಾವಣೆ ಫಲಿತಾಂಶ ಮೇ 2 ರಂದು ಪ್ರಕಟವಾಗಲಿದೆ.
ಐದೂ ರಾಜ್ಯಗಳಲ್ಲಿ ಒಟ್ಟು 18.5 ಕೋಟಿ ಮತದಾರರಿದ್ದಾರೆ. 2.74 ಲಕ್ಷ ಮತದಾನ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಅವರು ತಿಳಿಸಿದರು. ಬಿಹಾರದಲ್ಲಿ ಕೊರೊನಾ ಸಂದರ್ಭದಲ್ಲೂ ಯಶಸ್ವಿ ಚುನಾವಣೆ ನಡೆಸಿದ್ದೇವೆ. ಕೊರೊನಾಕ್ಕೆ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಈ ಐದೂ ರಾಜ್ಯಗಳ ಚುನಾವಣೆಯನ್ನೂ ಯಶಸ್ವಿಯಾಗಿ ನಡೆಸುತ್ತೇವೆ. ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ಹೆಚ್ಚುವರಿ ಒಂದು ಗಂಟೆ ನೀಡಲಾಗಿದೆ ಎಂದು ಅರೋರಾ ತಿಳಿಸಿದರು.
ಪಶ್ಚಿಮ ಬಂಗಾಳ (ಒಟ್ಟು ಕ್ಷೇತ್ರ 294): ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ ನಡೆಯಲಿದೆ. ಮಾರ್ಚ್ 27 ರಂದು ಮೊದಲ ಹಂತ, ಏಪ್ರೀಲ್ 1 ರಂದು ಎರಡನೇ ಹಂತ, ಏ 6 ರಂದು ಮೂರನೇ ಹಂತ, ಏ 10 ರಂದು 4ನೇ ಹಂತದ ಮತದಾನ, ಏ 17 ರಂದು 5 ನೇ ಹಂತದ ಮತದಾನ, ಏ 22 ರಂದು ಆರನೇ ಹಂತ, ಏ 26 ರಂದು 7 ನೇ ಹಂತದ ಮತದಾನ ಹಾಗೂ ಏ 29 ರಂದು ಕೊನೆಯ 8 ನೇ ಹಂತದ ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.
ತಮಿಳುನಾಡು (ಒಟ್ಟು ಕ್ಷೇತ್ರ 234): ತಮಿಳುನಾಡಿನಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಏಪ್ರೀಲ್ 6 ರಂದು ಅಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.
ಕೇರಳ (ಒಟ್ಟು ಕ್ಷೇತ್ರ 140): ಕೇರಳದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಏಪ್ರೀಲ್ 6 ರಂದು ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.
ಅಸ್ಸಾಂ (ಒಟ್ಟು ಕ್ಷೇತ್ರ 126): ಅಸ್ಸಾಂನಲ್ಲಿ ಒಟ್ಟು ಮೂರು ಹಂತದ ಮತದಾನ ನಡೆಯಲಿದೆ. ಮಾರ್ಚ್ 27 ರಂದು ಒಂದನೇ ಹಂತದ ಮತದಾನ, ಏಪ್ರೀಲ್ 1 ರಂದು ಎರಡನೇ ಹಂತದ ಮತದಾನ ಹಾಗೂ ಏಪ್ರೀಲ್ 6 ರಂದು ಮೂರನೇ ಹಂತದ ಮತದಾನ ಅಸ್ಸಾಂನಲ್ಲಿ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.
ಪುದುಚೇರಿ (ಒಟ್ಟು ಕ್ಷೇತ್ರ 33, (ಆರು ಜನ ನಾಮ ನಿರ್ದೇಶಿತ): ಇಲ್ಲಿ ಕೂಡ ಒಂದೇ ಹಂತದ ಮತದಾನ ನಡೆಯಲಿದೆ, ಏಪ್ರೀಲ್ 6 ರಂದು ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಬರಲಿದೆ.