ಕಳಸ: ಗ್ರಾಮಸಭೆಗೆ ಆಹಾರ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಬುಧವಾರ ನಡೆದ ಹೊರನಾಡು ಗ್ರಾಪಂ ಗ್ರಾಮಸಭೆಗೆ ಗೈರಾಗಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಅಧಿಕಾರಿಗಳು ಪ್ರತಿಬಾರಿ ಗ್ರಾಮಸಭೆ ನಡೆದಾಗಲೂ ಗೈರಾಗುತ್ತಿದ್ದಾರೆ. ಇವರ ಮೇಲೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಬೇಕು. ಕೃಷಿ ಇಲಾಖೆಯಿಂದ ನೀಡುತ್ತಿರುವ ಪೈಪ್ ಮತ್ತು ಜೆಟ್‌ಗಳು ಕಳಪೆಯಾಗಿದ್ದು, ಯಾವುದಕ್ಕೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ದೂರಿದರು.
ಹೊರನಾಡು ಗ್ರಾಮದಲ್ಲಿ ಗ್ರಾಮಾರಣ್ಯ ಸಮಿತಿ ಇಲ್ಲ. ಇಲ್ಲಿಗೆ ನೂತನ ಗ್ರಾಮಾರಣ್ಯ ಸಮಿತಿ ರಚಿಸಬೇಕು. ಈ ಭಾಗದಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು. ಬಿಡಾಡಿ ಜಾನುವಾರುಗಳನ್ನು ಜನವಸತಿ ಇರುವ ಕಡೆ ತಂದು ಬಿಡಲಾಗುತ್ತಿದೆ. ಇವುಗಳನ್ನು ಕ್ಯಾತನಮಕ್ಕಿಯಲ್ಲಿ ಬಿಡಲು ಅನುಮತಿ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಮೆಸ್ಕಾಂ ಇಲಾಖೆ ವಿದ್ಯುತ್‌ಬಿಲ್ ನೀಡುವವರು ಸರಿಯಾಗಿ ಮೀಟರ್ ರೀಡಿಂಗ್ ನೋಡದೆ ಅಂದಾಜು ಬಿಲ್‌ಗಳನ್ನು ನೀಡುತ್ತಿರುವುದರಿಂದ ಗ್ರಾಹಕರಿಗೆ ಗೃಹ ಜ್ಯೋತಿ ಪ್ರಯೋಜನಕ್ಕೆ ಬಾರದಂತಾಗಿದೆ. ಮೆಸ್ಕಾಂ ಮಾಡಿದ ಯಡವಟ್ಟಿಗೆ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಗೃಹಲಕ್ಷ್ಮಿ ಯೋಜನೆಯ 2000 ರೂ. ಬಿಡುಗಡೆಯಾಗಿ ವಾರವದರೂ ನಮಗೆ ಹಣ ಬಂದಿಲ್ಲ ಎಂದು ಮಹಿಳೆಯರು ಸಭೆ ಗಮನಕ್ಕೆ ತಂದರು.
ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಹೊರನಾಡಿನಲ್ಲಿ ಗ್ರಾಮಾರಣ್ಯ ಸಮಿತಿ ರಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಎಂದು ನೋಡೆಲ್ ಅಧಿಕಾರಿ ಸೋಮಶೇಖರ್ ಹೇಳಿದರು. ಜಾನುವಾರುಗಳನ್ನು ಕ್ಯಾತನಮಕ್ಕಿಯಲ್ಲಿ ಬಿಡಲು ನಮ್ಮ ಅಭ್ಯಂತರವಿಲ್ಲ ಇಲ್ಲ ಎಂದು ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಅಧ್ಯಕ್ಷತೆಯನ್ನು ಮಧು ಕುಮಾರ್, ಉಪಾಧ್ಯಕ್ಷೆ ಪುಷ್ಪಾಲತಾ ರಾಮು, ಸದಸ್ಯರಾದ ವೃಷಭರಾಜು, ಸನ್ಮತಿ, ಅದಿತ್ಯ, ಯಶೋಧ, ಪಿಡಿಒ ಅರುಣ್ ಕುಮಾರ್ ಇದ್ದರು.