ಬೆಂಗಳೂರು: ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಕೆ.ರಘುಪತಿ ಭಟ್‌ಗೆ ಬಿಜೆಪಿ ರಾಜ್ಯ ಶಿಸ್ತು ನೋಟಿಸ್ ನೀಡಿದೆ.
ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದಂತಾಗಿದೆ. ಈ ಪತ್ರ ತಲುಪಿದ ಎರಡು ದಿನದ ಒಳಗಾಗಿ ಬಿಜೆಪಿ ಶಿಸ್ತು ಸಮಿತಿ ಮುಂದೆ ಸ್ಪಷ್ಟೀಕರಣ ನೀಡಬೇಕು ಎಂದು ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ತಿಳಿಸಿ, ಬುಧವಾರ ನೋಟಿಸ್ ಜಾರಿ ಮಾಡಿದ್ದಾರೆ.
ಉಡುಪಿ ವಿಧಾನಸಭೆ ಕ್ಷೇತ್ರದ ಟಿಕೆಟ್ ವಂಚಿತ ರಘುಪತಿ ಭಟ್ ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧೆ ಬಯಸಿ, ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಡಾ.ಧನಂಜಯ ಸರ್ಜಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲುಳಿದು ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಸೇರಿ ಹಲವು ಮುಖಂಡರು ರಘುಪತಿ ಭಟ್ ಮನವೊಲಿಸಲು ಪ್ರಯತ್ನಿಸಿ ವಿಲರಾದರು. ಇದರಿಂದಾಗಿ ಕಠಿಣ ಶಿಸ್ತು ಕ್ರಮವಹಿಸಬೇಕು ಎಂಬ ಆಂತರಿಕ ಒತ್ತಡ ಪಕ್ಷದಲ್ಲಿ ಹೆಚ್ಚಿದೆ.
ನಾಮಪತ್ರ ಹಿಂಪಡೆಯುವ ಗಡುವಿಗೆ ಮುನ್ನ ಮನಸ್ಸು ಬದಲಾಯಿಸುವರು ಎಂಬ ಪಕ್ಷದ ನಿರೀಕ್ಷೆ ಹುಸಿಯಾಯಿತು. ಪಕ್ಷೇತರ ಅಭ್ಯರ್ಥಿಯಾಗಿ ಅಖಾಡದಲ್ಲುಳಿದ ಭಟ್‌ಗೆ ಪಕ್ಷದಿಂದ ಉಚ್ಚಾಟಿತ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬೆಂಬಲಿಸಿ, ಸಭೆಗಳಲ್ಲಿ ಭಾಗವಹಿಸಿದ್ದಾರೆ.
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಂಡಾಯ್ಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರನ್ನು ನಾಮಪತ್ರ ಹಿಂಪಡೆಯುವ ದಿನ ಮುಗಿಯುತ್ತಿದ್ದಂತೆ ಪಕ್ಷದಿಂದ ಉಚ್ಚಾಟಿಸಲಾಯಿತು. ನೈಋತ್ಯ ಪದವೀಧರ ಕ್ಷೇತ್ರಕ್ಕೆ ನಾಮಪತ್ರ ಹಿಂಪಡೆಯುವ ಗಡುವು ಮುಗಿದು ಮೂರು ದಿನಗಳು ಕಳೆದರೂ ಭಟ್ ವಿರುದ್ಧ ಕ್ರಮವಾಗಿಲ್ಲ.
ವಿಳಂಬದಿಂದ ಪಕ್ಷದ ಅಭ್ಯರ್ಥಿ ಮೇಲೆ ಅಡ್ಡಪರಿಣಾಮ ಉಂಟಾಗಲಿದೆ ಎಂಬ ಕಳವಳ ವ್ಯಕ್ತವಾಗಿದ್ದು, ಒತ್ತಡ ಹೆಚ್ಚಾಗುವ ಮುನ್ನ ಪಕ್ಷದ ರಾಜ್ಯ ಶಿಸ್ತುಸಮಿತಿ ಜಾಗ್ರತೆವಹಿಸಿ ಕ್ರಮಕೈಗೊಂಡಿದೆ.
ವಿಧಾನ ಪರಿಷತ್ ಶಿಕ್ಷಕರ, ಪದವೀಧರರ ಆರು ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕೆ ಇಳಿದಿರುವ ನಾಲ್ಕು ಕ್ಷೇತ್ರದ ಪಕ್ಷದ ರಾಜ್ಯ ನಾಯಕರು, ಚುನಾವಣಾ ಉಸ್ತುವಾರಿಗಳು ಬಿರುಸಿನ ಪ್ರವಾಸ ಕೈಗೊಂಡಿದ್ದಾರೆ.
ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಕ್ಷಕರು ಹಾಗೂ ಪದವೀಧರ ಸಮುದಾಯದ ಸಭೆಗಳು, ಖುದ್ದು ಭೇಟಿ ಮೂಲಕ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಈ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಬಹಿರಂಗ ಪ್ರಚಾರಕ್ಕೆ ಒಂದು ವಾರವಷ್ಟೇ ಬಾಕಿಯಿದ್ದು, ಕ್ಷೇತ್ರಮಟ್ಟದಲ್ಲಿ ಸಮನ್ವಯ ಸಮಿತಿ ಹಾಗೂ ಜಂಟಿ ಪ್ರಚಾರ ಚಟುವಟಿಕೆಗೆ ಕಾಲ ಕೂಡಿ ಬಂದಿಲ್ಲ.