ಶಿವಮೊಗ್ಗ: ನಗರದ ಬಡಾವಣೆಗಳಲ್ಲಿ 2,300 ನಿವೇಶನಗಳು ಖಾಲಿ ಇವೆ. ಇಲ್ಲಿ ಮನೆಗಳನ್ನು ಕಟ್ಟಬೇಕು. ಇಲ್ಲವಾದಲ್ಲಿ ಅವುಗಳನ್ನು ರದ್ದುಗೊಳಿಸಿ ಮನೆ ಅವಶ್ಯಕತೆ ಇರುವವರಿಗೆ ಹಂಚಿಕೆ ಮಾಡಲು ಸುತ್ತೋಲೆ ಹೊರಡಿಸಿರುವ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸೂಡಾ(ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಎಚ್.ಎಸ್.ಸುಂದರೇಶ್ ಎಚ್ಚರಿಕೆ ನೀಡಿದರು.
ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಶನಿವಾರ ಸೂಡಾದಿಂದ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೂಡಾ(ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ) ವ್ಯಾಪ್ತಿಯಲ್ಲಿ ಸುಮಾರು 14 ವರ್ಷಗಳಿಂದ ಬಡಾವಣೆ ನಿರ್ಮಾಣ ಆಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಅನೇಕ ವರ್ಷಗಳಿಂದ ನಿವೇಶನಕ್ಕೆ ಸಂಬಂಧಿಸಿದಂತೆ ತೊಂದರೆಗಳಿದ್ದು ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಹಲವರಿಗೆ ಈ ಸಂಬಂಧ ನೋಟಿಸ್ ನೀಡಲಾಗಿದೆ ಎಂದರು.
ಊರುಗಡೂರಿನ 60 ಎಕರೆ ಬಡಾವಣೆಯಲ್ಲಿ 672 ನಿವೇಶನ ನಿರ್ಮಿಸಲಾಗುವುದು. ರೈತರಿಗೆ ನೀಡುವ ನಿವೇಶನ ಹೊರತುಪಡಿಸಿ ಉಳಿದ 431 ನಿವೇಶನಗಳನ್ನು ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಿದ್ದು 2ರಿಂದ 3 ತಿಂಗಳ ಒಳಗೆ ಹಂಚಿಕೆ ಮಾಡಲಾಗುವುದು. ಗೋಪಿಶೆಟ್ಟಿಕೊಪ್ಪದಲ್ಲೂ 104 ಎಕರೆ ಜಮೀನು 50:50 ಅನುಪಾತದಲ್ಲಿ ರೈತರಿಂದ ಖರೀದಿಸಲಾಗುತ್ತಿದೆ. ನಿದಿಗೆಯಲ್ಲಿ 3 ಎಕರೆಯಲ್ಲಿ ಬಡಾವಣೆ ನಿರ್ಮಿಸಲಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಪ್ರಾಧಿಕಾರ ಜಮೀನು ಖರೀದಿಸಿ ಬಡಾವಣೆ ನಿರ್ಮಿಸುತ್ತಿದೆ ಎಂದರು.
ರೈತರು ಖಾಸಗಿಯವರಿಗೆ ಜಮೀನು ಮಾರುವ ಬದಲು ಕಾನೂನುಬದ್ಧವಾಗಿ ಸೂಡಾಗೆ ನೀಡಿದರೆ ಎಲ್ಲರಿಗೂ ಅನೂಕೂಲವಾಗುತ್ತದೆ. ಸೋಗಾನೆ, ಹೊಳೆಹೊನ್ನೂರು, ಭದ್ರಾವತಿ ಭಾಗದಲ್ಲಿ 50:50 ಆಧಾರದಲ್ಲಿ ಪ್ರಾಧಿಕಾರಕ್ಕೆ ಜಮೀನು ಮಾರಾಟ ಮಾಡಬಹುದು. ಪ್ರಾಧಿಕಾರದಿಂದ ಇನ್ನೂ ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು ಮಾಸ್ಟರ್‌ಪ್ಲ್ಯಾನ್ ತಯಾರಿಸಲಾಗುತ್ತಿದೆ.- ಎಚ್.ಎಸ್.ಸುಂದರೇಶ್, ಸೂಡಾ ಅಧ್ಯಕ್ಷ