ಬೆಂಗಳೂರು: ಲೋಕಸಭೆ ಚುನಾವಣೆ ಸಮಯದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ಹಾಗೂ ಚುನಾವಣಾ ಅಕ್ರಮದಲ್ಲಿ ತೊಡಗುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಿ ಮಲ್ಲೇಶ್ವರದ ಬಿಜೆಪಿ ಕಚೇರಿಯ ಕಾರ್ಯದರ್ಶಿ ಲೋಕೇಶ ಆಂಬೇಕಲ್ಲು ವಿರುದ್ಧ ನಗರ ಪಶ್ವಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಮತ್ತು ದಂಡಾಧಿಕಾರಿ ಜಾರಿ ಮಾಡಿದ್ದ ನೋಟಿಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಸಂಬಂಧ ಸ್ವೀಕರಿಸಿದ ನೋಟಿಸ್ ಪ್ರಶ್ನಿಸಿ ಲೋಕೇಶ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ರಜಾಕಾಲದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎಂ. ವಿನೋದ್ ಕುಮಾರ್, ನಗರದಲ್ಲಿ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಏ. 26ರಂದು ಪೂರ್ಣಗೊಂಡಿದೆ. ಆ ನಂತರ ಮೇ 15ರಂದು ಅರ್ಜಿದಾರರಿಗೆ ನೋಟಿಸ್ ಜಾರಿಗೊಳಿಸಿ ಮುಚ್ಚಳಿಕೆಗೆ ಸಹಿ ಹಾಕುವಂತೆ ನಗರದ ಪಶ್ವಿಮ ವಿಭಾಗದ ಉಪ ಪೊಲೀಸ್ ಆಯುಕ್ತರು ಒತ್ತಾಯಿಸಿದ್ದು, ವಾಟ್ಸ್‌ಆ್ಯಪ್ ಮೂಲಕ ನೋಟಿಸ್ ಜಾರಿಗೊಳಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿನ ಘಟನೆ ಆಧರಿಸಿ ಅರ್ಜಿದಾರರ ವಿರುದ್ಧ ಆರೋಪ ಮಾಡಿದ್ದು, ಆ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ಸಹ ನೀಡಿದೆ. ಹಾಗಾಗಿ, ಅರ್ಜಿದಾರರ ವಿರುದ್ಧ ನೋಟಿಸ್ ನೀಡಿರುವುದು ಕಾನೂನಿನ ಸ್ಪಷ್ಟ ದುರ್ಬಳಕೆ ಎಂದು ಕೋರ್ಟ್ ಗಮನಕ್ಕೆ ತಂದರು.
ಸರ್ಕಾರಿ ವಕೀಲರು, ರಾಜ್ಯದಲ್ಲಿ ಈಗಾಗಲೇ ಲೋಕಸಭೆ ಚುನಾವಣೆ ಮತದಾನ ಪೂರ್ಣಗೊಂಡಿದ್ದು, ಅರ್ಜಿದಾರರ ವಿರುದ್ಧ ಜಾರಿಗೊಳಿಸಿದ್ದ ನೋಟಿಸ್ ಸಹ ಮಾನ್ಯತೆ ಕಳೆದುಕೊಂಡಿದೆ ಎಂದು ಹೇಳಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ನೋಟಿಸ್ ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಹೀಗಾಗಿ, ಅರ್ಜಿದಾರರ ವಿರುದ್ಧದ ನೋಟಿಸ್ ಮಾನ್ಯತೆ ಕಳೆದುಕೊಂಡಿದೆ. ಆದ್ದರಿಂದ ಅದನ್ನು ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿದೆ.