ಬೆಂಗಳೂರು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುತ್ತಿರುವ ಹಳೆಯ ಪಾತ್ರೆಗಳನ್ನು ಬದಲಾಯಿಸಲು ಸೂಕ್ತ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.
ಪಿಎಂ ಪೋಷಣ್ ಕಾರ್ಯಕ್ರಮದಡಿ 2012-13 ಹಾಗೂ 2014-15ನೇ ಸಾಲಿನಲ್ಲಿ ಖರೀದಿಸಲಾಗಿರುವ ಅಡುಗೆ ಪಾತ್ರೆ-ಪರಿಕರಗಳ ಬದಲಾವಣೆಗಾಗಿ ಅನುಮೋದನೆ ನೀಡಲಾಗಿದೆ. 2023-24ನೇ ಸಾಲಿನ ಪಿಎಬಿ ಸಭಾ ನಡವಳಿಯಲ್ಲಿ ರಾಜ್ಯ ಸರ್ಕಾರವು ವಾರ್ಷಿಕ ಕ್ರಿಯಾ ಯೋಜನೆ ಮತ್ತು ಅನುದಾನದ ಮೂಲಕ ಸಲ್ಲಿಸಿರುವ ಪ್ರಸ್ತಾವನೆಯಂತೆ ಸರ್ಕಾರಿ ಮತ್ತು ಅನುದಾನಿತ ಸೇರಿ ಒಟ್ಟು 14,030 ಶಾಲೆಗಳ ಹಳೆಯ ಪಾತ್ರೆಗಳನ್ನು ಬದಲಾಯಿಸಲು ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ 1.72 ಕೋಟಿ ರೂ.ಗಳನ್ನು ಅನುದಾನ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಆಯುಕ್ತರು ತಿಳಿಸಿದ್ದಾರೆ.
ಅಲ್ಯೂಮಿನಿಯಂ ಪಾತ್ರೆಗಳ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಿ ಸ್ಟೈನ್‌ಲೆಸ್ ಪಾತ್ರೆಗಳನ್ನು ಮಾತ್ರ ಬಳಸಬೇಕು. ಪಾತ್ರೆಗಳನ್ನು ಖರೀದಿಸಿದ 15 ದಿನದೊಳಗಾಗಿ ಬಳಸಿದ ಅನುದಾನದ ಲೆಕ್ಕದ ಮಾಹಿತಿ ನೀಡುವಂತೆ ಶಾಲಾ ಶಿಕ್ಷಣ ಆಯುಕ್ತೆ ಬಿ.ಬಿ. ಕಾವೇರಿ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.