ಚೆನೈ: ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಸುವ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ತಮಿಳುನಾಡು ಯುವ ಹಾಗೂ ಕ್ರೀಡಾ ಸಚಿವ ಉದಯ್ನಿಧಿ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನೀಟ್ ಪರೀಕ್ಷೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಡಿಎಂಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಉದಯ್ನಿಧಿ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಉದಯ್ನಿಧಿ ಸ್ಟಾಲಿನ್ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ವಿದ್ಯಾರ್ಥಿಗಳ ಸಾವು ಆತ್ಮಹತ್ಯೆಯಲ್ಲ. ಅದು ಕೇಂದ್ರ ಸರ್ಕಾರ ಮಾಡಿರುವ ಕೊಲೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ನೀಟ್ ಬ್ಯಾನ್ ಮಾಡುವ ವಿಚಾರವಾಗಿ ವಿಧಾನಸಭೆಯಲ್ಲಿ ಸರ್ಕಾರದ ವತಿಯಿಂದ ನಿರ್ಣಯವನ್ನು ಅಂಗೀಕರಿಸಲಾಗಿದ್ದು, ಅದಕ್ಕೆ ಅಂಕಿತ ಹಾಕದೇ ರಾಜ್ಯಪಾಲರು ತಮ್ಮ ದುರಹಂಕಾರವನ್ನು ಪ್ರದರ್ಶಿಸುತ್ತಿದ್ದಾರೆ. ಅವರು ಆರ್.ಎನ್ ರವಿ ಅಲ್ಲ, ಆರ್ಎಸ್ಎಸ್ ರವಿ ಎಂದು ಟೀಕಿಸಿದ್ದಾರೆ.
ನೀವು ಈ ಕೂಡಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಒಂದು ವೇಳೆ ನೀವು ಚುನಾವಣೆಯಲ್ಲಿ ಗೆದ್ದರೆ ನಾನು ನಿಮ್ಮ ಮಾತನ್ನು ಕೇಳುತ್ತೇನೆ. ನೀಟ್ಗೆ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ನಿಟ್ಟನಲ್ಲಿ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನೀಟ್ ಪರೀಕ್ಷೆಯನ್ನು ರದ್ದು ಮಾಡುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಚಿವ ಉದಯ್ನಿಧಿ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.