ನ್ಯೂಸ್

ತನ್ನ ಪತ್ನಿಯ ಜತೆ ಲೈಂಗಿಕ ಕ್ರಿಯೆ ನಡೆಸಲು ಆನ್​ಲೈನ್​ನಲ್ಲಿ ಜನರನ್ನು ಆಹ್ವಾನಿಸಿದ ಪತಿಗೆ ಕೋರ್ಟ್​ ಶಾಕ್! Swapping Wife

Swapping Wife : ತನ್ನ ಪತ್ನಿಯನ್ನು "ಪಾರ್ಟ್ನರ್ ಸ್ವಾಪ್" (ಪತ್ನಿಯರ ವಿನಿಮಯ)ಗೆ ಒತ್ತಾಯಿಸಿದ ಮತ್ತು ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಆಹ್ವಾನಿಸಿದ ಆರೋಪದ ಮೇಲೆ ಬಂಧನವಾಗಿರುವ ವ್ಯಕ್ತಿಯೊಬ್ಬನಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ.

ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಲೈಂಗಿಕ ಕಿರುಕುಳ, ಕ್ರೌರ್ಯ ಮತ್ತು ನಂಬಿಕೆ ದ್ರೋಹ ಸೇರಿದಂತೆ ಇತರೆ ಆರೋಪಗಳ ಅಡಿಯಲ್ಲಿ ಬಂಧನವಾಗಿರುವ ವ್ಯಕ್ತಿಯ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಗಿರೀಶ್ ಕಠ್ಪಾಲಿಯಾ ವಿಚಾರಣೆ ನಡೆಸಿ, ಜಾಮೀನು ಕೊಡಲು ನಿರಾಕರಿಸಿದರು. ಜೂನ್ 9ರಂದು ನೀಡಿದ ಆದೇಶದಲ್ಲಿ, ನ್ಯಾಯಾಲಯವು, ಎಫ್‌ಐಆರ್‌ನಲ್ಲಿರುವ ಆರೋಪಗಳು ಸಾಮಾನ್ಯ ವೈವಾಹಿಕ ವಿವಾದ ಆರೋಪಗಳಲ್ಲ ಎಂದು ಅಭಿಪ್ರಾಯಪಟ್ಟಿದೆ.

ನನ್ನ ಬಾವ ನನ್ನನ್ನು ಅನುಚಿತವಾಗಿ ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಮತ್ತು ನನ್ನ ನಮ್ರತೆಗೆ ಧಕ್ಕೆ ತಂದಿದ್ದಾನೆ ಎಂಬ ಮಹಿಳೆಯ ಆರೋಪವನ್ನು ನ್ಯಾಯಾಲಯ ಪರಿಗಣಿಸಿದೆ. ಆದರೆ, ಆಕೆಯ ಗಂಡ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾನೆ. ತನಗಾದ ಹಿಂಸೆ ಮತ್ತು ಅವಮಾನವನ್ನು ಆಕೆ ಹೇಳಿಕೊಂಡರೂ ಅದೆಲ್ಲವನ್ನು ನಿರ್ಲಕ್ಷಿಸಿ, ಸುಮ್ಮನಿರುವಂತೆ ತಾಕೀತು ಮಾಡಿದ್ದಾನೆ.

ತನ್ನ ಪತ್ನಿಯನ್ನು ವೈಫ್​ ಸ್ವಾಪಿಂಗ್​ಗೆ ಒತ್ತಾಯ ಮಾಡಿದ್ದಲ್ಲದೆ, ಆಕೆಯ ಕೈಗಳನ್ನು ಬ್ಲೇಡ್‌ನಿಂದ ಕೊಯ್ದಿರುವುದು ಮತ್ತು ಗಾಯಗೊಂಡ ಕೈಗಳಿಂದ ಅಡುಗೆ ಕೆಲಸ ಮಾಡುವಂತೆ ಒತ್ತಾಯಿಸಿದ ಆರೋಪವೂ ಕೇಳಿಬಂದಿದೆ. ವೈಫ್​ ಸ್ವಾಪಿಂಗ್​ಗೆ ಒಪ್ಪಿಕೊಳ್ಳುವಂತೆ ಒತ್ತಾಯಿಸಿ, ಆಕೆಯನ್ನು ಬಲವಂತದಿಂದ ಹೋಟೆಲ್‌ಗೆ ಕರೆದೊಯ್ದಿದ್ದ. ಈ ವೇಳೆ ಆತನ ಸ್ನೇಹಿತರು ಆಕೆಗೆ ಕಿರುಕುಳ ನೀಡಿದ್ದು, ಅದೇ ಸಂದರ್ಭದಲ್ಲಿ ಆಕೆ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾಗಿ ಎಫ್‌ಐಆರ್​ನಲ್ಲಿ ಉಲ್ಲೇಖವಾಗಿದೆ. ಈ ವಿಚಾರವನ್ನು ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವೂ ಉಲ್ಲೇಖಿಸಿದೆ.

ಗಂಡನ ಕೃತ್ಯ ಇಲ್ಲಿಗೆ ಮುಗಿಯಲಿಲ್ಲ, ತನ್ನ ಪತ್ನಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಐಡಿಯನ್ನು ಸೃಷ್ಟಿಸಿ, ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಲ್ಲದೆ, ಹಣಕ್ಕಾಗಿ ಆಕೆಯ ಜೊತೆ ಲೈಂಗಿಕ ಸಂಬಂಧ ಹೊಂದಲು ಜನರನ್ನು ಆಹ್ವಾನಿಸಿದ ಆರೋಪವೂ ಇದೆ. ಸಂತ್ರಸ್ತ ಮಹಿಳೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹೇಳಿಕೆಯನ್ನು ಸಹ ದಾಖಲಿಸಿದ್ದು, ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ಅಪರಾಧಗಳನ್ನು ಆರೋಪಿ ಗಂಡನ ಮೇಲೆ ಹೊರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಎಲ್ಲ ಗಂಭೀರ ಆರೋಪಗಳನ್ನು ಪರಿಗಣಿಸಿ, ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. (ಏಜೆನ್ಸೀಸ್​)