ಬೆಂಗಳೂರು: ಚುನಾವಣೆ ಬಂದಾಗಲೆಲ್ಲ ಅಳುವುದು ಸರಿಯಲ್ಲ. ಜೆಡಿಎಸ್ ವರಿಷ್ಠರ ಕಣ್ಣೀರು ಚುನಾವಣೆಯಲ್ಲಿ ವರ್ಕ್‌ಔಟ್ ಆಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರ ಕಾರ್ಯಕ್ರಮ ತೋರಿಸಿ ಮತ ಕೇಳಲಿ. ಅದು ಬಿಟ್ಟು ಅಳುವುದೆಂದರೆ ಏನು? ಅಳುವುದಕ್ಕೂ ವೋಟಿಗೂ ಏನು ಸಂಬಂಧ? ಜನರ ಹಿತ ರಕ್ಷಣೆ ಮುಖ್ಯ. ನನ್ನನ್ನ ಗೆಲ್ಲಿಸಿ ಅಂತ ಹೇಳೋದಕ್ಕೂ ಅಳುವುದಕ್ಕೂ ಏನಾದರೂ ಸಂಬಂಧವಿದೆಯೆ? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಲೇವಡಿ ಮಾಡಿದರು.
ಸಂಸದರಾಗಿದ್ದ ಡಿ.ಕೆ. ಸುರೇಶ್ ಕೆಲಸ ಮಾಡಿ ಸೋತ ಕಾರಣಕ್ಕೆ ಕಣ್ಣೀರು ಹಾಕಿದ್ದರು. ಆದರೆ ಇವರು ಕಣ್ಣೀರು ಹಾಕುತ್ತಿರುವುದು ಏಕೆ ಎಂದು ಕೆಣಕಿದರು.
ಚುನಾವಣೆಯಲ್ಲಿ ಜನ ಯಾರ ಪರ ಇದ್ದಾರೆ ಎನ್ನುವುದು ಮುಖ್ಯ. ಸಹಜವಾಗಿ ಚನ್ನಪಟ್ಟಣ ಕಾಂಗ್ರೆಸ್ ಪರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೂ ಒಳ ಮೀಸಲಾತಿಗೂ ಏನು ಸಂಬಂಧವಿದೆ. ಎಂಪಾರಿಕಲ್ ಡೇಟಾ ಸಂಗ್ರಹ ಪ್ರೊಸೆಸ್ ನಡೆಯುತ್ತಿದೆ. ಬಿಜೆಪಿ 12 ವರ್ಷ ಆದರೂ ಸುಮ್ಮನಿದ್ದಿದ್ದೇಕೆ? ಚುನಾವಣೆಗಾಗಿ ಇದೆಲ್ಲ ಮಾಡುವುದು ಬೇಡ ಎಂದು ಟಾಂಗ್ ಕೊಟ್ಟರು.
ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯ ಪ್ರೇರಿತ. ಸಿಎಂ ಕಡಕ್ ಆಗಿ ನೋಟಿಸ್‌ವಾಪಸ್ ಪಡೆಲು ಸೂಚಿಸಿದ್ದಾರೆ. ಅದಾದ ಮೇಲೆ ಪ್ರತಿಭಟನೆ ನಡೆಸಲು ಏನಿದೆ? ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಿರಲಿಲ್ಲವೆ? ಬಿಜೆಪಿಯವರಿಗೆ ಅಷ್ಟೊಂದು ಕಾಳಜಿ ಇದ್ದರೆ ಅವರು ಹೇಗೆ ನೋಟಿಸ್ ಕೊಟ್ಟರು? ಎಂದು ಪ್ರಶ್ನಿಸಿದರು.
ಸಿಬಂ ಬದಲಾವಣೆ ವಿಚಾರ ಇಲ್ಲ
ಯಾವ ಸಿಎಂ ವಿಚಾರದ ಪ್ರಸ್ತಾಪವೂ ಇಲ್ಲ. ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ದಲಿತ ಸಿಎಂ ವಿಚಾರದ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಇರೋವರೆಗೂ ಅದು ಇಲ್ಲ ಎಂದು ಮಹದೇವಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.