ನ್ಯೂಸ್

ಆನ್​ಲೈನ್ ಸಿಎ ಪರೀಕ್ಷೆ ನಡೆಸಲಾಗದು: ಸುಪ್ರೀಂ ಕೋರ್ಟ್​ಗೆ ಐಸಿಎಐ ಸ್ಪಷ್ಟೀಕರಣ

ನವದೆಹಲಿ: ಕೋವಿಡ್ 19 ಇರುವ ಕಾರಣ ಕೆಲವು ಪರೀಕ್ಷಾರ್ಥಿಗಳು ಸಿಎ ಪರೀಕ್ಷೆಯನ್ನು ಆನ್​ಲೈನ್ ಮೂಲಕ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ದಾವೆ ಹೂಡಿದ್ದರು. ನ್ಯಾಯಪೀಠದ ಅಪೇಕ್ಷೆಯಂತೆ ಇನ್​ಸ್ಟಿಟ್ಯೂಟ್ ಆಫ್​ ಚಾರ್ಟರ್ಡ್​ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಬುಧವಾರ ಪ್ರತಿಕ್ರಿಯಿಸಿದ್ದು, ಆನ್​ಲೈನ್ ಮೂಲಕ ಸಿಎ ಪರೀಕ್ಷೆ ನಡೆಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಮೂರು ಗಂಟೆ ಅವಧಿಯ ಪರೀಕ್ಷೆಯಲ್ಲಿ ವಿವಿಧ ನಮೂನೆಯ ಪ್ರಶ್ನೆಗಳಿದ್ದು, ಅದಕ್ಕೆ ವಿವರಣಾತ್ಮಕ ಉತ್ತರವೂ ಬೇಕಾಗುತ್ತದೆ. ಟಿಕ್ ಮಾರ್ಕ್ ಹಾಕುವ ಅಥವಾ ಒಂದು ಶಬ್ದದಲ್ಲಿ ಉತ್ತರಿಸುವ ಪ್ರಶ್ನೆಗಳಲ್ಲ. ಹೀಗಾಗಿ ಆನ್​ಲೈನ್ ಪರೀಕ್ಷೆ ನಡೆಸಲಾಗದು ಎಂದು ಐಸಿಎಐ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್​, ದಿನೇಶ್ ಮಹೇಶ್ವರಿ, ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಪರೀಕ್ಷಾ ಸಂದರ್ಭದಲ್ಲಿ ಕೋವಿಡ್ 19 ತಡೆಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಏನೇನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ವಿವರವನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸುವಂತೆ ಸೂಚಿಸಿದೆ.

ಸಿಎ ಪರೀಕ್ಷೆ ನವೆಂಬರ್ 21ರಿಂದ ಡಿಸೆಂಬರ್ 14ರ ತನಕ ನಿಗದಿಯಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇರಲ್ಲ ಎಂಬುದನ್ನೂ ಐಸಿಎಐ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)