ಬೆಂಗಳೂರು: ಕ್ಯಾಪ್ಟನ್‌ಗಷ್ಟೇ ಅಲ್ಲ, ಪ್ಲೇಯರ್‌ಗೂ ಸೆಂಚುರಿ ಹೊಡೆಯೋ ಅವಕಾಶವಿದೆ. ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿ ನಾನಲ್ಲ. ಒಂದು ತಂಡವಾಗಿ ಕೆಲಸ ಮಾಡಲು ಬಿಜೆಪಿ ಬಯಸುತ್ತದೆ ಎಂದು ಪಕ್ಷದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಗೂಢಾರ್ಥದಲ್ಲಿ ಹೇಳಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನರ ಹಿತದೃಷ್ಟಿಯಿಂದ ಸದನದಲ್ಲಿ ಎಲ್ಲ ವಿಚಾರಗಳು ಚರ್ಚೆಯಾಗಬೇಕು. ವಿಪಕ್ಷ ನಾಯಕನ ಆಯ್ಕೆ ಪಕ್ಷಕ್ಕೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.
ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷ ತಾನು ಮಾಡಿದ ತಪ್ಪಿಗೆ 49 ವರ್ಷಗಳಾದರೂ ಕ್ಷಮೆ ಕೇಳಿಲ್ಲ. ದೇಶಕ್ಕೆ ತುರ್ತು ಪರಿಸ್ಥಿತಿ ಯಾವತ್ತೂ ಬರಬಾರದು. ಆ ಕರಾಳ ಅಧ್ಯಾಯನದ ನೆನಪು ಮಾಡಿಕೊಳ್ಳುವ ಪರಿಸ್ಥಿತಿಯಿದೆ ಎಂದು ಸಿ.ಟಿ.ರವಿ ಪ್ರತಿಪಾದಿಸಿದರು.
ವ್ಯಕ್ತಿಗತ ಸ್ವಾರ್ಥಕ್ಕಾಗಿ ಏನನ್ನೂ ಬೇಕಾದರೂ ಮಾಡುವ ಮನಸ್ಥಿತಿ ಕಾಂಗ್ರೆಸ್ ಪಕ್ಷದ ಡಿಎನ್‌ಎನಲ್ಲೇ ಇದೆ. ಈ ಮನಸ್ಥಿತಿ ಪ್ರಜಾಪ್ರಭುತ್ವಕ್ಕೂ ಅಪಾಯಕಾರಿಯಾಗಿದೆ. ಇಂದಿರಾಗಾಂಧಿಯವರ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಮಾಡಿತ್ತು ಎಂದರು.
ಕಾಂಗ್ರೆಸ್ ನಲ್ಲಿ ಜಾತಿಗೊಂದು ಡಿಸಿಎಂ ಹುದ್ದೆಗಳ ಸೃಜನೆ ಚರ್ಚೆ ನಡೆಯುತ್ತಿದೆ. ಜಾತಿ, ರಾಗ, ದ್ವೇಷ ಇಲ್ಲದೆ ಎಂದು ಪ್ರಮಾಣವಚನ ಸ್ವೀಕರಿಸಿ, ಅದೇ ಜಾತಿ ರಾಜಕಾರಣ ಮಾಡುವುದು ಎಂದು ಟೀಕಿಸಿದರು.
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಇಳಿಸುವುದು, ಡಿಸಿಎಂ ಡಿ.ಕೆ.ಶಿವಕುಮಾರ್ ನಮ್ಮ ಪಕ್ಷದ ಗುರಿ ಖಂಡಿತ ಅಲ್ಲ. ಅವರ ಪಕ್ಷದಲ್ಲಿನ ಶಾಸಕರಿಗೇ ಅಲ್ಲಿರಲು ಇಚ್ಛೆಯಿಲ್ಲವೆಂದರೆ ಏನು ಮಾಡಲು ಸಾಧ್ಯ ? ಎಂದು ಕೇಳಿದರು.
ಇಷ್ಟಕ್ಕೂ ಸರ್ಕಾರ ರಚಿಸುವಷ್ಟು ಶಾಸಕರ ಸಂಖ್ಯಾಬಲ ಪಕ್ಷಕ್ಕಿಲ್ಲ. ಆಪರೇಷನ್ ಕಮಲ ಮಾಡಲ್ಲ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅಭಿವೃದ್ಧಿ ಸ್ಥಗಿತದಿಂದ ಜನ ರೋಸಿಹೋಗಿದ್ದಾರೆ. ಈ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 19 ಸೀಟು ಗೆದ್ದಿದೆ ಎಂದು ಉದಾಹರಿಸಿದರು.
ಕೆಐಒಸಿಎಲ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ದೇವದಾರಿ ಅರಣ್ಯ ಪ್ರದೇಶದಲ್ಲಿ 401 ಎಕರೆ ಹಿಂದೆಯೇ ಮಂಜೂರಾಗಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿತ ಸಂಸ್ಥೆಯ ಕಡತಕ್ಕೆ ಕೇಂದ್ರ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ರುಜು ಹಾಕಿದ್ದಾರೆ.
ಆದರೆ ಉದ್ದೇಶಿತ ಅರಣ್ಯ ಜಮೀನನ್ನು ಈ ಸಂಸ್ಥೆಗೆ ಹಸ್ತಾಂತರಿಸುವುದಕ್ಕೆ ರಾಜ್ಯ ಸರ್ಕಾರ ತಡೆಯೊಡ್ಡಿದೆ. ಕಾಂಗ್ರೆಸ್‌ನವರು ಕಿಕ್ ಬ್ಯಾಕ್‌ಗೆ ಯೋಚಿಸಿರಬಹುದು. ಸರ್ಕಾರಿ ಸಂಸ್ಥೆಯವರು ಕಿಕ್‌ಬ್ಯಾಕ್ ಕೊಡಲ್ಲ ಎಂದು ಸಿ.ಟಿ.ರವಿ ಕುಟುಕಿದರು.