ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತುಳುನಾಡಿನ ಪುರಾತನ ನಂಬಿಕೆಯಾದ ದೈವರಾಧನೆ ಕುರಿತಂತೆ ಸಾಲು ಸಾಲು ಸಿನಿಮಾಗಳು ಬಂದಿವೆ. ಹಾಗೆಯೇ ಬರುತ್ತಿವೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರವು ಪಂಜುರ್ಲಿ ದೈವದ ಕುರಿತಾಗಿತ್ತು. ಹೆಚ್ಚಿನ ಪ್ರೇಕ್ಷಕರು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. ಇದೇ ಸಾಲಿಗೆ ಸುಧೀರ್ ಅತ್ತಾವರ ನಿರ್ದೇಶನದ ಕೊರಗಜ್ಜ ಸೇರ್ಪಡಯಾಗಿದೆ.
ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಇತಿಹಾಸವನ್ನು ಹೊಂದಿರುವ ಈ ಸಿನಿಮಾವು ಚಿತ್ರೀಕರಣ ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮುಂದಿನ ಡಿಸೆಂಬರ್ ತಿಂಗಳಿಗೆ ಬಿಡುಗಡೆಯಾಗಲು ಸಕಲ ಸಿದ್ಧತೆ ನಡೆಸಿದೆ. ಆದರೆ, ಈ ಮಧ್ಯೆ ವಿವಾದ ಎದ್ದಿದೆ. ಅದು ಏನೆಂದರೆ ಚಿತ್ರದಲ್ಲಿ ಐತಿಹಾಸಿಕ ಪುರುಷ ಕೊರಗಜ್ಜ ದೈವನಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಹೀಗಾಗಿ ಚಿತ್ರವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಆರೋಪಕ್ಕೆ ಚಿತ್ರತಂಡವು ಸ್ಪಷ್ಟನೆ ನೀಡಿದ್ದು, ಚಿತ್ರದಲ್ಲಿ ದೈವವನ್ನು ಅಪಹಾಸ್ಯವಾಗಿ ತೋರಿಸಿಲ್ಲ ಎಂದಿದ್ದಾರೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸುಧೀರ್ ಅತ್ತಾವರ ಮಾತನಾಡಿದ್ದು, ‘ಕೊರಗಜ್ಜ’ ಚಿತ್ರದ ಮೂಲಕ ಜಗತ್ತಿಗೆ ದೈವರಾಧನೆ ಬಗ್ಗೆ ತಿಳಿಸಲು ಹೊರಟಿದ್ದೇವೆ ಹೊರತು, ನಂಬಿಕೆಯನ್ನು ಅಪಹಾಸ್ಯ ಮಾಡುವ ಉದ್ದೇಶ ಹೊಂದಿಲ್ಲ. ದೈವದ ಅನುಗ್ರಹ ಪಡೆದ ಬಳಿಕವೇ ಚಿತ್ರೀಕರಣ ಆರಂಭಿಸಿದ್ದೇವೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಕಥೆಗಾಗಿ ಸಾಕಷ್ಟು ಪರಿಶ್ರಮ ಪಡಲಾಗಿದ್ದು, ಚಿತ್ರದ ಕಥೆ ಹೆಣೆಯಲು ಹಲವು ತಿಂಗಳುಗಳ ಕಾಲ ಸಂಶೋಧನೆ ನಡೆಸಲಾಗಿದೆ. ಅಲ್ಲದೇ, ಐತಿಹಾಸಿಕ ಪುರುಷ ಕೊರಗಜ್ಜನ ಕುರಿತಂತೆ ಮಾಹಿತಿಗಾಗಿ ಹಲವು ಸಂಶೋಧಕರು, ಇತಿಹಾಸ ತಜ್ಱರು, ಬುಡಕಟ್ಟು ಜನಾಂಗದವರು, ಮೂಲತಃ ಅವರ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದೇವೆ. ಕೊರಗಜ್ಜನ ಸುತ್ತ ಸಾಕಷ್ಟು ಕಥೆಗಳಿವೆ. ಇಂದಿನ ಸಮಾಜಕ್ಕೆ ಸ್ಪೂರ್ತಿಯಾಗುವಂತೆ, ದೈವ ಪುರುಷನ ಮೇಲೆ ಭಕ್ತಿ, ಪವಾಡಗಳ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರೀಕರಣ ವೇಳೆ ದಾಳಿ: ಸಿನಿಮಾ ಚಿತ್ರೀಕರಣದ ವೇಳೆಯೂ ನಮ್ಮ ಮೇಲೆ ಹಲವು ಬಾರಿ ದಾಳಿಯಾಗಿದೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ಕೆಲವು ತಿಂಗಳು ಶೂಟಿಂಗ್ ನಿಲ್ಲಿಸಿ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದೇವೆ. ಆದರೆ, ನಮ್ಮ ಮೇಲೆ ಯಾವ ಕಾರಣಕ್ಕೆ ದಾಳಿಯಾಗಿದೆ ಎಂಬುದು ನಿಜವಾಗಿಯೂ ಈವರೆಗೆ ನಮಗೆ ತಿಳಿದಿಲ್ಲ’ ಎಂದು ಸುಧೀರ್ ಅತ್ತಾವರ ನೋವು ತೋಡಿಕೊಂಡಿದ್ದಾರೆ. ಅಲ್ಲದೇ ಮೊದಲನಿಂದಲೂ ನಿರ್ಮಾಪಕ ತ್ರಿವಿಕ್ರಮ್ ಸಫಲ್ಯ ಚಿತ್ರತಂಡಕ್ಕೆ ಬೆಂಬಲಾಗಿ ನಿಂತಿದ್ದಾರೆ. ಐತಿಹಾಸಿಕ ಪುರುಷನ ಚಿತ್ರಕ್ಕಾಗಿಯೇ ಅವರು ಸಾಕಷ್ಟು ಬಂಡವಾಳ ಹಾಕಿದ್ದಾರೆ. ಬಾಲಿವುಡ್, ಸ್ಯಾಂಡಲ್ವುಡ್ ನಟರನ್ನು ಚಿತ್ರದಲ್ಲಿ ಅವಕಾಶ ನೀಡಿದ್ದಾರೆ ಎಂದರು.
ಕೊರಗಜ್ಜ ಚಿತ್ರದಲ್ಲಿ ನಟಿಯರಾದ ಭವ್ಯಾ, ಶ್ರುತಿ, ಬಾಲಿವುಡ್ ನಟ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್ ತಾರಾಗಣದಲ್ಲಿದ್ದಾರೆ.