Unhappy Leave : ಸದ್ಯ ಜೀವನ ಸಾಗಬೇಕಾದರೆ ಕೆಲಸ ಅನ್ನೋದು ತುಂಬಾ ಮುಖ್ಯ. ದುಡಿಮೆ ಇಲ್ಲದಿದ್ದರೆ ತುತ್ತಿನ ಊಟಕ್ಕೂ ಪರದಾಡಬೇಕಾಗುತ್ತದೆ. ಹೀಗಾಗಿ ಒಂದು ಕೆಲಸ ಸಿಗಲಿ ಅಂತಾ ಅಲೆದಾಡುವ ಎಷ್ಟೋ ಮಂದಿಯನ್ನು ನಾವು ನೋಡಿದ್ದೇವೆ. ಇನ್ನು ಕೆಲಸ ಅಂತಾ ಬಂದಾಗ ಕೆಲ ಉದ್ಯೋಗ ತುಂಬಾ ಸರಳವಾಗಿದ್ದರೆ, ಹೆಚ್ಚಿನವು ತೀವ್ರ ಒತ್ತಡದಿಂದ ಕೂಡಿರುತ್ತವೆ. ಆದರೆ, ಎಷ್ಟೇ ಒತ್ತಡವಿರಲಿ ಕೆಲಸಕ್ಕಂತೂ ಹಾಜರಾಗಲೇಬೇಕು. ಇದು ಕೆಲವು ಕಂಪನಿಗಳ ಪರಿಸ್ಥಿತಿಯಾಗಿದೆ. ಬಹುತೇಕ ನಿಗದಿತ ರಜೆಗಳನ್ನು ಸಹ ಪಡೆಯಲಾಗದು.
ಪ್ರಸ್ತುತ ಪರಿಸ್ಥಿತಿಯಲ್ಲಿ ವಾರದ ಆರು ದಿನಗಳು ದುಡಿದು, ಒಂದು ದಿನ ವೀಕ್-ಆಫ್ ಪಡೆಯುವುದೇ ಎಲ್ಲಿಲ್ಲದ ಸಂತಸ. ಇದೊಂದು ದಿನ ಎಲ್ಲರಿಗೂ ಪೂರ್ಣ ಪ್ರಮಾಣದಲ್ಲಿ ವಿಶ್ರಾಂತಿಸುವ ದಿನವಾಗಿರುತ್ತದೆ. ಆದರೆ, ಕೆಲವೊಮ್ಮೆ ವೀಕಾಫ್ ಕೂಡ ಸಿಗುವುದಿಲ್ಲ. ವೀಕಾಫ್ ಹೊರತುಪಡಿಸಿದರೆ, ಹಬ್ಬ ಹಾಗೂ ಇತರೆ ದಿನಗಳಲ್ಲಿ ರಜೆ ಸಿಗಬಹುದೇ ವಿನಃ ಉಳಿದ ಇನ್ಯಾವುದೇ ದಿನಗಳಲ್ಲಿ ಸುಖಾಸುಮ್ಮನೆ ಕಾರಣಗಳಿಗೆ ಲೀವ್ ಸಿಗೋದಿಲ್ಲ. ಇದು ಪ್ರತಿ ಸಂಸ್ಥೆಯ ಉದ್ಯೋಗಿಗಳಿಗೆ ತಿಳಿದಿರುವ ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ಹಬ್ಬಗಳಿಗೂ ರಜೆ ಸಿಗಲ್ಲ. ಅಲ್ಲದೆ, ಕೆಲವು ಕಡೆ ಹೆಚ್ಚುವರಿ ಕೆಲಸವನ್ನೂ ಮಾಡಬೇಕಾಗುತ್ತದೆ. ಇನ್ನು ವಾರಕ್ಕೆ 90 ಗಂಟೆ ಕೆಲಸ ಮಾಡಿ ಎಂದು ಭಾರತದಲ್ಲಿ ಕೆಲ ಉದ್ಯಮಿಗಳು ಆಗಾಗ ಹೇಳುವುದನ್ನು ನೀವು ಕೇಳಿರುತ್ತೀರಿ. ಈ ಬಗ್ಗೆ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿದೆ.
ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಉತ್ತಮ ವರ್ಕ್-ಲೈಫ್ ಸಮತೋಲನವನ್ನು ಕಾಪಾಡಿಕೊಳ್ಳಲು ಹಾಗೂ ಅದಕ್ಕೆ ಹೆಚ್ಚು ಸಹಾಯ ತನ್ನಿಂದ ಆಗಬೇಕು ಎಂಬ ಹಿತದೃಷ್ಟಿಯಿಂದ ಉದ್ಯೋಗಿಗಳು ಬೇಸರವಾಗಿದ್ದರೆ ಅಥವಾ ಸಂತೋಷದಿಂದ ಕೆಲಸ ಮಾಡಲು ಸಾಧ್ಯವಿಲ್ಲ ಅಂದರೆ, ಆ ದಿನ ಅವರು ಸ್ವಯಂ ರಜೆ ತೆಗೆದುಕೊಳ್ಳುವ ಅಧಿಕಾರವನ್ನು ಕೊಟ್ಟಿದ್ದಾರೆ. ಇದು ನಿಜಾನಾ ಅಂತಾ ನಿಮಗೆ ಅನಿಸಬಹುದು. ಆದರೆ, 100ಕ್ಕೆ ನೂರು ನಿಜ. ಹೆಚ್ಚುವರಿ ಕೆಲಸ ಮಾಡಿ ಎಂದು ಹೇಳುವವರ ಮಧ್ಯೆ ಈ ಕಂಪನಿಯ ಮಾಲೀಕ ವಿಭಿನ್ನವಾಗಿ ನಿಂತಿದ್ದಾರೆ.
ಚೀನಾದ ಹೆನಾನ್ ಪ್ರಾಂತ್ಯದ ಪ್ಯಾಂಗ್ ಡಾಂಗ್ ಲೈನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಯು ಡಾಂಗ್ಲೈ ಎಂಬ ಮಾಲೀಕ, ತನ್ನ ಉದ್ಯೋಗಿಗಳು ತಮ್ಮ ಅನುಕೂಲಕ್ಕಾಗಿ ಹೆಚ್ಚುವರಿ 10 ದಿನಗಳ ರಜೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಕಂಪನಿಯ ಪ್ರತಿಯೊಬ್ಬ ಸಿಬ್ಬಂದಿಗೆ ಸ್ವಾತಂತ್ರ್ಯ ಇರಬೇಕೆಂದು ನಾನು ಬಯಸುತ್ತೇನೆ. ಎಲ್ಲರಿಗೂ ಒಂದೊಂದು ನೋವು ಇರುತ್ತದೆ. ಅವರೆಲ್ಲ ಸಂತೋಷದಿಂದ ಇರಬೇಕು. ಆದ್ದರಿಂದ ಸಂತೋಷವಾಗಿರದಿದ್ದರೆ, ಅಂದು ಉದ್ಯೋಗಿಗಳು ಕೆಲಸಕ್ಕೆ ಬರಬೇಡಿ ಎಂದು ತಿಳಿಸಿದ್ದೇನೆ ಎಂದು ಯು ಡಾಂಗ್ಲೈ ಹೇಳಿದ್ದಾರೆ.
ನಾನಿದನ್ನು ಅನ್ಹ್ಯಾಪಿ ಲೀವ್ ಎಂದು ಕರೆಯುತ್ತೇನೆ. ಉದ್ಯೋಗಿಗಳಿಗೆ ಸಮಯಬೇಕಿದೆ, ಅವರಿಗೆ ಸಂತೋಷ ಕಾಣುತ್ತಿಲ್ಲ ಅಂದರೆ ರಜೆ ತೆಗೆದುಕೊಳ್ಳುವ ಸ್ವಾತಂತ್ರ್ಯ ಅವರಿಗೆ ಕೊಟ್ಟಿದ್ದೇನೆ. ಇದನ್ನು ನಿರಾಕರಿಸಲಾಗುವುದಿಲ್ಲ. ಈ ಯೋಜನೆಯಡಿ ನೌಕರರು ಸಂತೋಷವಾಗದಿದ್ದರೆ ಕೆಲಸದಿಂದ ದೂರ ಉಳಿಯಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ್ದಾರೆ.
ಕಂಪನಿಯ ಉದ್ಯೋಗ ನೀತಿಯಡಿಯಲ್ಲಿ, ಉದ್ಯೋಗಿಗಳು ದಿನಕ್ಕೆ ಏಳು ಗಂಟೆಗಳು ಮಾತ್ರ ಕೆಲಸ ಮಾಡಬೇಕಾಗುತ್ತದೆ. ವಾರಾಂತ್ಯದ ರಜೆಯನ್ನು ಅವರು ಹೊಂದಿರಲೇಬೇಕು. ಹೊಸ ವರ್ಷದ ಸಮಯದಲ್ಲಿ ಐದು ದಿನಗಳ ರಜೆಯೊಂದಿಗೆ 30 ರಿಂದ 40 ದಿನಗಳ ವಾರ್ಷಿಕ ರಜೆಗೂ ಅರ್ಹರಾಗಿರುತ್ತಾರೆ. ನಾವು ಹಣ ಗಳಿಸಿ, ಶ್ರೀಮಂತರಾಗಲು ಬಯಸುವುದಿಲ್ಲ. ನಮ್ಮ ಉದ್ಯೋಗಿಗಳು ಆರೋಗ್ಯಕರ ಮತ್ತು ವಿಶ್ರಾಂತಿ ಜೀವನವನ್ನು ಹೊಂದಬೇಕೆಂದು ಬಯಸುತ್ತೇವೆ ಎಂದು ಯು ಡಾಂಗ್ಲೈ ಹೇಳಿದ್ದಾರೆ.
ಖಾಸಗಿ ಕಂಪನಿ ಪರಿಚಯಿಸಿರುವ ಈ ಬದಲಾವಣೆಗಳಿಗೆ ಚೀನಾದ ಸಾಮಾಜಿಕ ಜಾಲತಾಣದ ಬಳಕೆದಾರರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿ, ಬೆಂಬಲವನ್ನು ತೋರಿಸಿದ್ದಾರೆ. ವೈಬೊ (ಚೀನೀ ಸಾಮಾಜಿಕ ಮಾಧ್ಯಮ) ದ ಓರ್ವ ಬಳಕೆದಾರ, ಇಂತಹ ಉತ್ತಮ ಬಾಸ್ ಮತ್ತು ಈ ಕಂಪನಿ ಸಂಸ್ಕೃತಿಯನ್ನು ದೇಶಾದ್ಯಂತ ಪ್ರಚಾರ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪಾಂಗ್ ಡಾಂಗ್ ಲೈಗಾಗಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಾ, ನನಗೆ ಆ ಕಂಪನಿಯಲ್ಲಿ ಸಂತೋಷ ಮತ್ತು ಗೌರವ ಸಿಗುತ್ತದೆ ಎಂದು ಅನಿಸುತ್ತದೆ ಎಂದಿದ್ದಾರೆ.
ಚೀನಾದಲ್ಲಿ ಕೆಲಸದ ಸ್ಥಳದಲ್ಲಿನ ಒತ್ತಡದ ಕುರಿತು 2021ರ ಸಮೀಕ್ಷೆಯ ಪ್ರಕಾರ, ಶೇ. 65ಕ್ಕಿಂತ ಹೆಚ್ಚು ಉದ್ಯೋಗಿಗಳು ಕೆಲಸದಲ್ಲಿ ದಣಿವು ಮತ್ತು ಅತೃಪ್ತಿ ಅನುಭವಿಸುತ್ತಾರೆ ಎಂದು ತಿಳಿದುಬಂದಿದೆ. ಸಿಬ್ಬಂದಿಯನ್ನು ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಮಾಡುವುದು ಮತ್ತು ಇತರ ಜನರ ಬೆಳವಣಿಗೆಗೆ ಇರುವ ಅವಕಾಶಗಳನ್ನು ಕಸಿದುಕೊಳ್ಳುವುದು ಅನೈತಿಕ ಎಂದಿರುವ ಯು ಡೊಂಗ್ಲೈ ಅವರು ದೀರ್ಘ ಕೆಲಸದ ಸಮಯವನ್ನು ಪ್ರತಿಪಾದಿಸುವ ಚೀನೀ ಬಾಸ್‌ಗಳ ಸಂಸ್ಕೃತಿಯನ್ನು ಖಂಡಿಸುತ್ತಿದ್ದಾರೆ. (ಏಜೆನ್ಸೀಸ್)