ಡಿಸಿ ಅಕ್ರಂಪಾಷಾ  
ನ್ಯೂಸ್

ಒತ್ತಡಗಳಿಗೆ ಮಣಿದಿಲ್ಲ, ಕಾನೂನು ಮೀರಿಲ್ಲ

ಕೋಲಾರ: ಕಂದಾಯ ಇಲಾಖೆಯಲ್ಲಿ ಶೇ.25 ಹುದ್ದೆಗಳು ಖಾಲಿಯಿದ್ದರೂ ಪ್ರಗತಿ ಸಾಧಿಸಲಾಗಿದೆ. ಸಿಬ್ಬಂದಿ ಸಮಸ್ಯೆಗಳಿಗೂ ಸ್ಪಂದಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಲಾಗುತ್ತಿದೆ. ವೇಗಕ್ಕೆ ಹೊಂದಿಕೊಂಡು ಇ-ಆಫೀಸ್ ಜಾರಿಗೆ ತಂದಿದ್ದು, ಸಾರ್ವಜನಿಕರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ ತೃಪ್ತಿ ಇದೆ...

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷಾ ಸೇವಾನುಭವದ ಕುರಿತು ಮಾಹಿತಿ ಹಂಚಿಕೊಂಡದ್ದು ಹೀಗೆ.

ಜಿಲ್ಲೆಯಲ್ಲಿ ಕಂದಾಯ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಹಲವು ಸುಧಾರಣೆ ತಂದಿದ್ದು, ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆಲ್ಲ ಅಧಿಕಾರಿಗಳು, ಸಿಬ್ಬಂದಿ ಪ್ರಾಮಾಣಿಕವಾಗಿ ಸಲ್ಲಿಸಿರುವ ಸೇವೆಯೇ ಕಾರಣ ಎಂದ ಅವರು, ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಡುವೆಯೂ ಪ್ರಗತಿ ಸಾಧಿಸಲಾಗಿದೆ. ಸಿಬ್ಬಂದಿ ಸಮಸ್ಯೆಗಳಿಗೂ ಸ್ಪಂದಿಸಿ ಬಡ್ತಿ ನೀಡಿ, ಪ್ರಕರಣ ತನಿಖೆ ಪೂರ್ಣಗೊಳಿಸಿದ್ದೇನೆ ಎಂದರು.

ಸಾರ್ವಜನಿಕ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಒತ್ತಡಗಳು ಬರುವುದು ಸಹಜ, ಆದರೆ ಕಾನೂನಡಿ ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಹಜ, ಒಂದೇ ಜಾಗ ಶಾಶ್ವತವಲ್ಲ. ಇದ್ದಷ್ಟು ದಿನ ಉತ್ತಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

* ಸಕಾಲದಲ್ಲಿ ಸಾಧನೆ

ಸಕಾಲದಲ್ಲಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಸಕಾಲದಲ್ಲಿ ವಿಲೇ ಮಾಡಿ ಅರ್ಜಿದಾರರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಆದ್ದರಿಂದ ರಾಜ್ಯಮಟ್ಟದಲ್ಲಿ ಸಕಾಲ ಯೋಜನೆಯಡಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಡಿಸಿ ಸಂಸತ ವ್ಯಕ್ತಪಡಿಸಿದರು.

* ಪಿಎಂ ಕಿಸಾನ್, ಫ್ರೂಟ್ ಐಡಿಯಲ್ಲೂ ಪ್ರಗತಿ

ಪಿಎಂ ಕಿಸಾನ್ ಯೋಜನೆ ಅನುಷ್ಠಾನಕ್ಕೆ ಆಂದೋಲನ ಕೈಗೆತ್ತಿಕೊಂಡಿದ್ದರಿAದ ಆರಂಭದಲ್ಲಿ ಶೇ.70 ಇದ್ದ ಪ್ರಗತಿ ಈಗ ಶೇ.98 ಸಾಧನೆ ಆಗಿದೆ. ಆಧಾರ್, ಖಾತೆ ಜೋಡಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರದಿಂದ ಬರುವ ಹಣವೂ ನೇರ ಖಾತೆಗೆ ಡಿಬಿಟಿ ಆಗುತ್ತಿದೆ. ಫ್ರೂಟ್ ಐಡಿ ನೋಂದಣಿ ಶೇ.98 ಸಾಧನೆಯಾಗಿದೆ ಎಂದು ಅಕ್ರಂಪಾಷಾ ತಿಳಿಸಿದರು.

* ಭೂ ಕಬಳಿಕೆ, ದುರುಪಯೋಗಕ್ಕೆ ತಡೆ

ಪಹಣಿಗೆ ಆಧಾರ್ ಸೀಡಿಂಗ್ ಮಾಡುವುದು ಕಂದಾಯ ಸಿಬ್ಬಂದಿಗೆ ಸವಾಲು ಎನಿಸಿದರೂ ತ್ವರಿತಗತಿಯಲ್ಲಿ ಮಾಡಿದ್ದಾರೆ. 10 ಲಕ್ಷ ಪಹಣಿಗೆ ಆರ್‌ಟಿಸಿ 9,29,000 ಸೀಡಿಂಗ್ ಆಗಿದೆ. ಜಿಲ್ಲೆಯಲ್ಲಿ ೩೪,೮೬೦ ಸರ್ಕಾರಿ ಸ್ವತ್ತುಗಳನ್ನು ಜೀಯೋ ಟ್ಯಾಗಿಂಗ್ ಮಾಡಿದ್ದು, ಒತ್ತುವರಿ ತಡೆಯಲಾಗುತ್ತಿದೆ. ಸರ್ಕಾರಿ ಗೋಮಾಳ, ಕೆರೆ, ಕಾಲುವೆ ಸ್ಥಳಕ್ಕೆ ಮೂರು ತಿಂಗಳಿಗೊಮ್ಮೆ ತಹಸೀಲ್ದಾರ್‌ಗಳು ತೆರಳಿ ಸ್ಥಿತಿಗತಿ ಪರಿಶೀಲಿಸಲಿದ್ದಾರೆ. ಇನ್ನು ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡುವ ಕಾರ್ಯ ಚಾಲ್ತಿಯಲ್ಲಿದೆ ಎಂದು ಅಕ್ರಂ ಪಾಷಾ ಹೇಳಿದರು.

* ಪ್ರಕರಣಗಳ ಇತ್ಯರ್ಥ

ಕಂದಾಯ ನ್ಯಾಯಾಲಯಗಳಲ್ಲಿ 19 ಸಾವಿರ ಪ್ರಕರಣ ಪೈಕಿ ಎಸಿ ಕೋರ್ಟ್ನಲ್ಲಿ 8,000 ಹಾಗೂ ತಹಸೀಲ್ದಾರ್ ಕೋರ್ಟ್ಗಳಲ್ಲಿ ಪ್ರಕರಣಗಳು ಬಾಕಿಯಿದ್ದವು, 16 ಸಾವಿರ ವಿಲೇವಾರಿ ಮಾಡಿದ್ದು, ಅದನ್ನು 920ಕ್ಕೆ ಇಳಿಕೆ ಮಾಡಲಾಗಿದೆ. ಎಸಿ ಕಚೇರಿಯಲ್ಲಿ 3,000 ಬಾಕಿಯಿರುವ ಪ್ರಕರಣ ಇತ್ಯರ್ಥಪಡಿಸಲು ಹೆಚ್ಚುವರಿಯಾಗಿ ಸರ್ಕಾರವು ಇಬ್ಬರು ಎಸಿಗಳನ್ನು ನೇಮಕ ಮಾಡಿದೆ. ಮೂರು ತಿಂಗಳ ಮೇಲ್ಪಟ್ಟ ಯಾವುದೇ ಪ್ರಕರಣಗಳು

ನ್ಯಾಯಾಲಯದಲ್ಲಿ ಬಾಕಿಯಿಲ್ಲ ಎಂದು ಡಿಸಿ ಮಾಹಿತಿ ನೀಡಿದರು.

* ಸೋಲಾರ್ ಘಟಕ ನಿರ್ಮಾಣಕ್ಕೆ ಕ್ರಮ

ಜಿಲ್ಲಾಡಳಿತ ಭವನದಲ್ಲಿ ಉಪಯೋಗ ಆಗುವ ವಿದ್ಯುತ್‌ಗೆ ಶುಲ್ಕ ಪಾವತಿ ಮಾಡಿರಲಿಲ್ಲ, ಈಗ ಪ್ರತಿ ಇಲಾಖೆಯಿಂದ ಶುಲ್ಕ ವಸೂಲಿ ಮಾಡಿ 15 ಲಕ್ಷ ರೂ. ಹೆಚ್ಚುವರಿಯಾಗಿ ಖಾತೆಯಲ್ಲಿ ಉಳಿಸಲಾಗಿದೆ. ಕಟ್ಟಡದ ಮೇಲೆ 400 ಕೆವಿ ಸಾಮರ್ಥ್ಯದ ಸೋಲಾರ್ ಘಟಕ ನಿರ್ಮಾಣಕ್ಕೆ ಖಾಸಗಿ ಕಂಪನಿ ಮುಂದೆ ಬಂದಿದ್ದು, ಉಪಯೋಗ ಆಗಿ ಉಳಿದ ವಿದ್ಯುತ್‌ಅನ್ನು ಪವರ್ ಗ್ರೀಡ್‌ಗೆ ನಾವೆ ಕೊಡುತ್ತೇವೆ ಎಂದು ಡಿಸಿ ತಿಳಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿರುವ ಹುದ್ದೆಗಳ ಭರ್ತಿಗೆ ಸರ್ಕಾರದ ಮೇಲೆ ಒತ್ತಡ ತಂದು 18 ಮಂದಿಯನ್ನು ವರ್ಗಾವಣೆ ಮಾಡಿಸಿದೆ. ಆದರೆ ಮೂರು ಮಂದಿ ಬಂದರು. ಉಳಿದವರು ಜಿಲ್ಲೆಗೆ ಬರಲು ಹಿಂದೇಟು ಹಾಕಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

* ಸಾರ್ವಜನಿಕರ ಉದ್ದೇಶಕ್ಕೆ ಭೂ ಮಂಜೂರು

ಕೆಜಿಎಫ್‌ನಲ್ಲಿ ಮೀಸಲು ಪೊಲೀಸರಿಗೆ 600 ಎಕರೆ ಜಾಗ ನೀಡಲಾಗಿದೆ. ಕೆಐಡಿಬಿ ಕೈಗಾರಿಕೆಗಳ ಉದ್ದೇಶಕ್ಕೆ 600 ಎಕರೆ, ಟೌನ್‌ಶಿಪ್‌ಗೆ 300 ಎಕರೆ ಹಾಗೂಪೊಲೀಸ್ ವಸತಿ ಗೃಹಗಳಿಗೆ 60 ಎಕರೆ ಜಾಗ ಕಲ್ಪಿಸಲಾಗಿದೆ ಎಂದು ಡಿಸಿ ತಿಳಿಸಿದರು.

ಸಂವಾದದಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಸುರೇಶ್ ಇದ್ದರು.