ವಿಕ್ರಮ ನಾಡಿಗೇರ ಧಾರವಾಡ
ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವಲ್ಲಿ ಹು-ಧಾ ಮಹಾನಗರ ಪಾಲಿಕೆ ಸದಾ ಹಿಂದೆ ಎಂಬ ಮಾತಿದೆ. ಅದಕ್ಕೆ ಜನನ ಹಾಗೂ ಮರಣ ಪ್ರಮಾಣಪತ್ರದ ತಿದ್ದುಪಡಿ ಕಾರ್ಯವೇ ಸಾಕ್ಷಿ. ಒಂದು ದಿನದಲ್ಲಿ ಪೂರ್ಣಗೊಳ್ಳುವ ಕಾರ್ಯಕ್ಕೆ ತಿಂಗಳು ಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಒಬ್ಬ ವ್ಯಕ್ತಿ ಹುಟ್ಟಿದರೆ, ತೀರಿಕೊಂಡರೆ ಪ್ರಮಾಣಪತ್ರ ಕಡ್ಡಾಯವಾಗಿ ಬೇಕು. ಆದರೆ ಕೆಲ ಸಮಯದಲ್ಲಿ ಪ್ರಮಾಣಪತ್ರ ಪಡೆಯುವಾಗ ಕೆಲವು ದೋಷಗಳಾಗುವುದು ಸಾಮಾನ್ಯ. ಇಂತಹ ದೋಷಗಳ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಸರಿಯಾದ ಪ್ರಮಾಣಪತ್ರ ಪಡೆಯಲು ತಿಂಗಳು ಗಟ್ಟಲೆ ಕಾಯಬೇಕು. ಇದಕ್ಕೆ ಹುಬ್ಬಳ್ಳಿ ಕಚೇರಿಯನ್ನೇ ನೆಚ್ಚಿಕೊಂಡಿದ್ದೇ ಕಾರಣ.
ಪ್ರಮಾಣಪತ್ರದಲ್ಲಿ ಒಂದೇ ಅಕ್ಷರ ದೋಷವಿದ್ದರೂ ಬೇಗ ತಿದ್ದುಪಡಿ ಆಗುವುದಿಲ್ಲ. ಪಾಲಿಕೆ ನಿಯಮದ ಅನುಸಾರ (ಅಫಿಡೆವಿಟ್‌ನೊಂದಿಗೆ ಅರ್ಜಿ ಸಲ್ಲಿಸಬೇಕು) ಅರ್ಜಿ ಸಲ್ಲಿಸಿದರೂ ತಿಂಗಳು ಗಟ್ಟಲೇ ಕಾಯಬೇಕು. ಈ ಮೊದಲು ದೋಷಗಳ ತಿದ್ದುಪಡಿ ಅರ್ಜಿ ಪರಿಶೀಲಿಸಿ ಸಹಿ ಮಾಡಿ ಅನುಮೋದಿಸುವ ಅಧಿಕಾರ ಪ್ರತಿ ವಲಯ ಅಧಿಕಾರಿಗಿತ್ತು. ಆದರೆ ರಾಜ್ಯ ಸರ್ಕಾರ ಈ ಅಧಿಕಾರ ಹಿಂಪಡೆದು ಆರೋಗ್ಯಾಧಿಕಾರಿ ಅಥವಾ ಆಯುಕ್ತರಿಗೆ ಅಧಿಕಾರ ನೀಡಿದೆ. ಆಯುಕ್ತರು ಪ್ರತಿ ಅರ್ಜಿ ಗಮನಿಸಿ ಅನುಮೋದನೆ ನೀಡುವುದು ಕಷ್ಟ ಎಂದು ಆರೋಗ್ಯ ಅಧಿಕಾರಿಗಳೇ ಅರ್ಜಿ ವಿಲೇ ಮಾಡುತ್ತಿದ್ದಾರೆ.
12 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಹು-ಧಾ ಅವಳಿನಗರದಲ್ಲಿ ನಿತ್ಯ ನೂರಾರು ಅರ್ಜಿಗಳು ಸಲ್ಲಿಕೆ ಆಗುತ್ತವೆ. ಆದರೆ ಪಾಲಿಕೆ ಮಾತ್ರ ಪ್ರಮಾಣಪತ್ರ ತಿದ್ದುಪಡಿ ಕಾರ್ಯವನ್ನು ಹುಬ್ಬಳ್ಳಿ ಕಚೇರಿಯಲ್ಲಿ ಮಾತ್ರವೇ ಮಾಡುತ್ತಿದೆ. ಇದೇ ವಿಳಂಬಕ್ಕೆ ಕಾರಣ ಎಂಬ ಮಾತಿದೆ. ಧಾರವಾಡದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಹುಬ್ಬಳ್ಳಿಗೆ ಕಳುಹಿಸಲು ಎರಡ್ಮೂರು ದಿನ ವಿಳಂಬ ಮಾಡುತ್ತಾರೆ. ಹುಬ್ಬಳ್ಳಿ ಕಚೇರಿ ತಲುಪಿದ ಬಳಿಕ ಕಡತಗಳಲ್ಲಿ ಇಟ್ಟು ಸುಮ್ಮನಾಗುತ್ತಾರೆ. ಅರ್ಜಿ ಕೊಟ್ಟವರು ನಿತ್ಯ ಎಡತಾಕುವುದು ತಪ್ಪಿದ್ದಲ್ಲ. ಧಾರವಾಡದ ವ್ಯಕ್ತಿಯೊಬ್ಬರು ಅರ್ಜಿ ನೀಡಿದ 6 ತಿಂಗಳ ಬಳಿಕ ತಿದ್ದಪಡಿಯಾಗಿ ಅವರ ಕೈ ಸೇರಿದ್ದು ತಾಜಾ ಉದಾಹರಣೆ.
ಇನ್ನಾದರೂ ಪಾಲಿಕೆ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸಲು ಲಕ್ಷೃ ವಹಿಸಿ ಹು-ಧಾ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವವರೇ ಅಥವಾ ಅಲಕ್ಷೃತನ ಮುಂದುವರೆಸುವರೇ ಎಂಬುದನ್ನು ಕಾದು ನೋಡಬೇಕಿದೆ.
ಪ್ರಭಾವ ಇದ್ದರೆ ಒಂದೇ ದಿನ: ಪ್ರಮಾಣಪತ್ರ ತಿದ್ದುಪಡಿಗೆ ಅರ್ಜಿ ಸಲ್ಲಿಸಿದವರು ಉನ್ನತ ಮಟ್ಟದ ಪ್ರಭಾವ ಬಳಸಿದರೆ ಒಂದೇ ದಿನದಲ್ಲಿ ಸಿಗುತ್ತದೆ. ಇದು ಆಶ್ವರ್ಯ ಅನಿಸಿದರೂ ಸತ್ಯ. ಮೇಲಧಿಕಾರಿಗಳು ಇಲ್ಲವೇ ಪಾಲಿಕೆ ಸದಸ್ಯರ ಮೂಲಕ ಒಂದು ಫೋನ್ ಮಾಡಿಸಿದರೆ ಸಾಕು. ಅದೇ ದಿನ ತಿದ್ದುಪಡಿ ಆಗಲಿದೆ. ಯಾರೂ ಗೊತ್ತಿಲ್ಲದೆ ಇದ್ದರೆ ಕಾಯವುದು ತಪ್ಪಿದ್ದಲ್ಲ. ಇನ್ನು ಕೆಲವೊಮ್ಮೆ ಲಂಚದ ಆಸೆಗೂ ಅರ್ಜಿ ವಿಲೇ ಮಾಡಿದ್ದುಂಟು. 500 ರೂ., 1000 ರೂ. ನೀಡಿದರೆ 2-3 ದಿನಗಳಲ್ಲೇ ದೋಷ ತಿದ್ದುಪಡಿ ಮಾಡಿದ ಸಂಗತಿಗಳೂ ಸಾಕಷ್ಟಿವೆ.
ಯಾವುದೇ ಅರ್ಜಿಗಳು ಬಾಕಿ ಉಳಿದಿಲ್ಲ ಎಂಬ ಮಾಹಿತಿ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದರೆ. ಆದರೆ ನ್ಯಾಯಾಲಯದಿಂದ ಆದೇಶ ತರುವಂತಹ ಅರ್ಜಿಗಳು ಮಾತ್ರ ಉಳಿದಿವೆ. ಆದಾಗ್ಯೂ ಅರ್ಜಿ ವಿಲೇವಾರಿ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು.ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತರು