ನ್ಯೂಸ್

ಎಲ್ಲರೂ ಪಾಸ್ ಅಲ್ಲ, ಪ್ರಗತಿ ಸಾಧಿಸಿದವರಷ್ಟೇ ತೇರ್ಗಡೆ!

ಖಾಸಗಿ ಶಾಲೆಗಳ ಹೊಸ ಬಾಂಬ್ ಅಸೈನ್ಮೆಂಟ್, ಪ್ರಾಜೆಕ್ಟ್ ಸರಿಯಾಗಿ ಮಾಡದಿದ್ದರೆ ತೊಂದರೆ

ಬೆಂಗಳೂರು: ಏನು ಓದದೇ, ಬರೆಯದೇ ಇದ್ದರೂ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ತೇರ್ಗಡೆಗೊಳ್ಳುತ್ತಾರೆಂದು ನೀವು ಭಾವಿಸಿದ್ದರೆ ಅದು ಸುಳ್ಳು! ಈ ಹಿಂದೆ ವ್ಯಾಸಂಗ ಮಾಡುವ ವೇಳೆ ಅಸೈನ್ಮೆಂಟ್, ಪ್ರಾಜೆಕ್ಟ್​ಗಳನ್ನು ಸರಿಯಾಗಿ ಮಾಡದೇ ಇದ್ದರೆ ಅಂತಹ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಲು ಖಾಸಗಿ ಶಾಲೆಗಳು ಆಲೋಚಿಸಿವೆ. ಶಿಕ್ಷಣ ಇಲಾಖೆ ಪರೀಕ್ಷೆ ಇಲ್ಲದೆಯೇ ಮೌಲ್ಯಾಂಕನ ನಡೆಸಿ ಪಾಸ್ ಮಾಡಿ ಎಂದಿದೆ. ಆದರೆ, ಖಾಸಗಿ ಶಾಲೆಗಳು ಈ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. ಕಲಿಕಾ ಪ್ರಕ್ರಿಯೆಯಲ್ಲಿ ಹಿಂದುಳಿದವವರನ್ನು ಹಾಗೂ ದಾಖಲಾತಿ ಪಡೆಯದೇ ಇರುವ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿವೆ.

ನಿಮ್ಮ ಮಕ್ಕಳು ನಿರಂತರ ಮತ್ತು ಸಮಗ್ರ ಮೌಲ್ಯಾಂಕನ(ಸಿಸಿಇ)ಗಳಲ್ಲಿ ಉತ್ತಮ ಪ್ರಗತಿ ಹೊಂದಿದ್ದರೆ ಮಾತ್ರವೇ ಅಂತಹ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುತ್ತೇವೆ. ಇಲ್ಲವಾದರೆ, ನಿಮ್ಮ ಮಕ್ಕಳನ್ನು ಸೇತುಬಂಧ ಕಾರ್ಯಕ್ರಮಕ್ಕೆ ಸೇರಿಸಿ ಆನಂತರ ಕಲಿಕೆ ವೃದ್ಧಿ ಮಾಡಬೇಕಾಗುತ್ತದೆ ಎಂಬ ಸಂದೇಶವನ್ನು ಖಾಸಗಿ ಶಾಲೆಗಳು ಪಾಲಕರಿಗೆ ಕಳುಹಿಸಿವೆ.

ಸರ್ಕಾರದ ಆದೇಶದಲ್ಲೇನಿದೆ?: ಮೌಲ್ಯಾಂಕನ ವಿಶ್ಲೇಷಣೆ ಅನುಪಾಲನೆ, ಸದರಿ 1ರಿಂದ 9ನೇ ತರಗತಿಯ ಮೌಲ್ಯಾಂಕನ ಉದ್ದೇಶ ವಿದ್ಯಾರ್ಥಿಗಳನ್ನು ಉತ್ತೀರ್ಣ, ಅನುತ್ತೀರ್ಣ ಎಂದು ತೀರ್ವನಿಸುವುದಿಲ್ಲ. ಬದಲಾಗಿ ಅವರ ಕಲಿಕೆಯ ಪ್ರಗತಿ ಹಾಗೂ ಕೊರತೆಯನ್ನು ತಿಳಿದು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಸೇತು ಬಂಧ ಕಾರ್ಯಕ್ರಮ ನಡೆಸಿ ಈ ಕೊರತೆ ತುಂಬಲು ಕ್ರಮವಹಿಸಬೇಕು ಎಂದಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಖಾಸಗಿ ಶಾಲೆಗಳು ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲು ಮುಂದಾಗುತ್ತಿವೆ.

ಉತ್ತೀರ್ಣ ಆದೇಶಕ್ಕೆ ಕೇಂದ್ರ ಪಠ್ಯಕ್ರಮ ಸೇರಿಸಿ

1ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಪ್ರಕ್ರಿಯೆಗೆ ಕೇಂದ್ರ ಪಠ್ಯಕ್ರಮದ ಶಾಲೆಗಳನ್ನು ಸೇರಿಸಬೇಕು, ಇಲ್ಲವಾದರೆ ಇದು ಶಿಕ್ಷಣ ಹಕ್ಕು ಕಾಯ್ದೆಯ(ಆರ್​ಟಿಇ) ನಿಯಮಗಳನ್ನು ಸ್ಪಷ್ಟ ಉಲ್ಲಘಂನೆ ಮಾಡಿದಂತೆ ಎಂದು ಕರ್ನಾಟಕ ಖಾಸಗಿ ಶಾಲಾ ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ. ಆರ್​ಟಿಇ ಕಾಯ್ದೆಗೆ ಎಲ್ಲ ರೀತಿಯ ಶಾಲೆಗಳು ಸೇರ್ಪಡೆಗೊಳ್ಳುತ್ತವೆ. ರಾಜ್ಯ ಸರ್ಕಾರ ತೇರ್ಗಡೆ ಮಾಡುವ ಆದೇಶವನ್ನು ಹೊರಡಿಸುತ್ತಿದ್ದಂತೆಯೇ ಕೇಂದ್ರ ಪಠ್ಯಕ್ರಮ ಶಾಲೆಗಳು ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿ ರೂಪಿಸಿವೆ. ಪರೀಕ್ಷೆ ಹಾಜರಾಗಬೇಕಾದಲ್ಲಿ, ಬಾಕಿ ಶುಲ್ಕ ಪಾವತಿಸುವಂತೆ ಪಾಲಕರಿಗೆ ಸೂಚನೆ ನೀಡಿವೆ. ಈ ವಿಚಾರವಾಗಿ ಸಾಕಷ್ಟು ದೂರುಗಳು ಬಂದಿದ್ದು, ತೇರ್ಗಡೆ ಮಾಡುವ ಆದೇಶದಲ್ಲಿ ಕೇಂದ್ರ ಪಠ್ಯಕ್ರಮ ಶಾಲೆಗಳನ್ನೂ ಸೇರಿಸಬೇಕೆಂದು ವೇದಿಕೆಯ ಸಂಚಾಲಕ ಬಿ.ಎನ್.ಯೋಗಾನಂದ ಮನವಿ ಮಾಡಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ ಮುಂದೂಡಿ

ಸಮರ್ಪಕ ರೀತಿಯಲ್ಲಿ ತರಗತಿಗಳನ್ನು ನಡೆಸಿ, ಇಲ್ಲವಾದರೆ ಮೇ 24ಕ್ಕೆ ನಿಗದಿಯಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿ ಎಂದು ವಿದ್ಯಾರ್ಥಿಗಳ ತಂಡ ಸಚಿವ ಎಸ್.ಸುರೇಶ್​ಕುಮಾರ್ ಅವರನ್ನು ಆಗ್ರಹಿಸಿತು. ಹನೂರು ತಾಲೂಕಿನಲ್ಲಿ ಶುಕ್ರವಾರ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡ ಪಾಲಕರೊಂದಿಗೆ ಭೇಟಿ ಮಾಡಿ, ಪರೀಕ್ಷೆಗಳು ಹತ್ತಿರವಾಗುತ್ತಿದ್ದರೂ ಕಾಲೇಜಿನಲ್ಲಿ ಪಾಠಗಳಿನ್ನೂ ಮುಕ್ತಾಯ ವಾಗಿಲ್ಲ. ಹೀಗಿರುವಾಗ ಪರೀಕ್ಷೆ ಎದುರಿಸುವುದು ಹೇಗೆ ಎಂದು ಪ್ರಶ್ನಿಸಿತು. ಈ ನಡುವೆ ಆನ್​ಲೈನ್ ಕ್ಲಾಸ್ ಕೂಡ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ನಮಗೆ ಭಾರಿ ತೊಡಕುಂಟಾಗಿದೆ. ಆದ್ದರಿಂದ ಪರೀಕ್ಷೆ ಮುಂದೂಡಿ ಎಂದು ಒತ್ತಾಯಿಸಿತು.

ಯಾರಿಗಿಲ್ಲ ಅವಕಾಶ...

  • ಕನಿಷ್ಠ ಕಲಿಕೆಯಲ್ಲಿ ಪ್ರಗತಿ ಸಾಧಿಸದೇ ಇರುವ ವಿದ್ಯಾರ್ಥಿಗಳು
  • ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸದೆಯೇ ಇರುವವರು
  • ಶಾಲೆಗಳಿಗೆ ದಾಖಲಾತಿ ಪಡೆಯದೇ ಇರುವ ಮಕ್ಕಳು

ಸಿಸಿಇನಲ್ಲಿ ಉತ್ತಮ ಪ್ರಗತಿ ಸಾಧಿಸಿಲ್ಲವಾದರೆ, ಅಂತಹ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಪಾಸ್ ಮಾಡುವುದು ಕಷ್ಟ. ಅಂತಹ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮ ಮಾಡಿ ಆನಂತರ ಅವರ ಪ್ರಗತಿ ಪರಿಶೀಲಿಸುತ್ತೇವೆ. | ಡಿ.ಶಶಿಕುಮಾರ್ ಪ್ರಧಾನ ಕಾರ್ಯದರ್ಶಿ, ಕ್ಯಾಮ್ಸ್ ಸಂಘಟನೆ ಸರ್ಕಾರ ಎಲ್ಲರನ್ನೂ ಪಾಸ್ ಮಾಡಬೇಕೆಂದು ಹೇಳಿದ ಮೇಲೆ, ಖಾಸಗಿ ಶಾಲೆಗಳು ಸರ್ಕಾರ ನಿಯಮವನ್ನು ಪಾಲಿಸಿ ಪಾಸ್ ಮಾಡಬೇಕು. ಶುಲ್ಕ ವಸೂಲಿಗೆ ಈ ರೀತಿ ಅನುತ್ತೀರ್ಣ ಮಾಡುವುದು ಸರಿಯಲ್ಲ. | ವಸಂತ ಪಾಲಕಿ ಬೆಂಗಳೂರು