ಚಂಡೀಗಡ: ಚುನಾವಣೆ ಬಂತೆಂದರೆ ರಾಜಕಾರಣಿಗಳು ಏನೆಲ್ಲಾ ಆಶ್ವಾಸನೆಗಳನ್ನು ಕೊಡುತ್ತಾರೆ. ತಮ್ಮ ಪಕ್ಷವನ್ನೇ ಅಧಿಕಾರಕ್ಕೆ ತಂದರೆ ಚಂದ್ರನ ಮೇಲೆ ಸೈಟು ಕೊಡಿಸುತ್ತೇವೆ ಎಂದರೂ ಆಶ್ಚರ್ಯವಿಲ್ಲ. ಅಂಥದ್ದೇ ಒಂದು ಪ್ರಯತ್ನವನ್ನು ಆಮ್ ಆದ್ಮಿ ಪಕ್ಷ(ಎಎಪಿ)ದ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಚುನಾವಣೆಗೆ ವೇದಿಕೆ ಸಜ್ಜಾಗುತ್ತಿರುವ ಪಂಜಾಬಿನಲ್ಲಿ ಮಾಡಿದ್ದಾರೆ.
ರೈತರು ವಿವಿಧ ಸಂಕಷ್ಟಗಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವುದು ಭಾರತದಾದ್ಯಂತ ಹರಡಿರುವ ಸಮಸ್ಯೆಯಾಗಿದೆ. ಆದ್ದರಿಂದ ಪಂಜಾಬಿನ ರೈತಸಮುದಾಯದವರ ಗಮನ ಸೆಳೆಯಲು ಕೇಜ್ರಿವಾಲ್ ರೈತರ ಸಮಸ್ಯೆಗಳಿಗೆ ಮುಕ್ತಿ ಹಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಅದನ್ನೇ ಉತ್ಪ್ರೇಕ್ಷೆ ಮಾಡಿರುವ ಕೇಜ್ರಿವಾಲ್ ಪಂಜಾಬಿನಲ್ಲಿ ಎಎಪಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಒಬ್ಬನೂ ರೈತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಕೇಜ್ರಿವಾಲ್ರ ಈ ರೀತಿಯಾದ ಭಾಷಣದ ವಿಡಿಯೋ ತುಣಕನ್ನು ಪೋಸ್ಟ್ ಮಾಡಿರುವ ಎಎಪಿಯ ಅಧಿಕೃತ ಟ್ವಿಟರ್ ಖಾತೆ, ಅದೇ ಮಾತನ್ನು ಪುನರುಚ್ಚರಿಸಿದೆ. "ನಾನು ಪೂರ್ಣ ಜವಾಬ್ದಾರಿಯಿಂದ ಹೇಳ್ತಾ ಇದ್ದೀನಿ. ಪಂಜಾಬಿನಲ್ಲಿ ಫೆಬ್ರವರಿಯಲ್ಲಿ ಚುನಾವಣೆ ಇದೆ. ಮಾರ್ಚ್ ತಿಂಗಳಲ್ಲಿ ಫಲಿತಾಂಶ ಬಂದುಬಿಡುತ್ತದೆ. ಏಪ್ರಿಲ್ 1 ರಿಂದ ಒಬ್ಬನೂ ರೈತ ಆತ್ಮಹತ್ಯೆ ಮಾಡಿಕೊಳ್ಳಲು ನಾವು ಬಿಡುವುದಿಲ್ಲ. ಅದಕ್ಕಾಗಿ ಏನೇ ಮಾಡಬೇಕಾದರೂ ಸರಿ" ಎಂದು ವಿಡಿಯೋದಲ್ಲಿ ಕೇಜ್ರಿವಾಲ್ ಉತ್ಸಾಹದ ಮಾತನ್ನಾಡಿರುವುದನ್ನು ಕಾಣಬಹುದು.
ಜೊತೆಗೆ, "ಏನು ಇಷ್ಟು ದೊಡ್ಡ ಮಾತು ಹೇಳುತ್ತಾನಲ್ಲ ಅಂದ್ಕೋಬೇಡಿ. ನಾನು ಏನು ಹೇಳುತ್ತೇನೋ ಅದನ್ನೇ ಮಾಡುತ್ತೇನೆ" ಎಂದಿರುವ ಕೇಜ್ರಿವಾಲ್, 70 ವರ್ಷಗಳಲ್ಲಿ ಮಾಡದೇ ಇರುವ ಕೆಲಸವನ್ನು ತಮ್ಮ ಪಕ್ಷ ಮಾಡುತ್ತದೆ ಎಂದಿದ್ದಾರೆ. ಈ ರೀತಿಯ ಪ್ರಣಾಳಿಕೆಯನ್ನು ಚುನಾವಣೆಯಲ್ಲಿ ಇಟ್ಟುಕೊಳ್ಳುವುದು ಮೆಚ್ಚುವಂಥ ವಿಷಯವೇ ಆದರೂ, ಇದು ನಿಜವಾಗಲೂ ಸಾಧಿಸಬಲ್ಲ ಗುರಿಯೇ ಎಂದು ಹಲವು ನೆಟ್ಟಿಗರು ಪ್ರಶ್ನೆ ಹಾಕಿದ್ದಾರೆ.
ಕೇಜ್ರಿವಾಲ್ರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಒಬ್ಬರು, "ನಿಮಗೆ ಸಾಧ್ಯವಾಗುವಂತಹ ಪ್ರಾಮಿಸ್ ಮಾಡಿ.... ಆಮೇಲೆ ಸೆಂಟರ್ ಸೆಂಟರ್ ಅನ್ನಬೇಡಿ" ಎಂದು ಲೇವಡಿ ಮಾಡಿದ್ದಾರೆ. ಮತ್ತೊಬ್ಬರು, ದೆಹಲಿಯಲ್ಲಿ ಕರೊನಾದಿಂದ ಸಾವುಗಳಾಗುತ್ತಿದ್ದ ಸಮಯದಲ್ಲಿ ಎಲ್ಲಿದ್ದಿರಿ? ಆಕ್ಸಿಜನ್ ಸಿಲಿಂಡರ್ ಇರಲಿಲ್ಲ, ಚಿಕಿತ್ಸೆ ಇರಲಿಲ್ಲ. ಪಂಜಾಬಿನ ಜನರನ್ನು ಮೂರ್ಖರೆಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.