ತಮಿಳುನಾಡಿನಲ್ಲಿ ಸಿಡಿಲಿನ ಅಬ್ಬರಕ್ಕೆ 14 ಜನ ಬಲಿ
ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ
ನೀಲಗಿರಿಯಲ್ಲಿ 62 ಕಡೆ ಭೂಕುಸಿತ, ಬಂಡೆ ಬಿದ್ದು ಚಾಲಕ ಸಾವು
Tamil Nadu monsoon rains: ನೆರೆರಾಜ್ಯ ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಮಳೆ ಸಕತ್ ಅಬ್ಬರಿಸ್ತಿದೆ. ಭಾರಿ ಮಳೆಯಿಂದಾಗಿ ಅಲ್ಲಿ ಜನಜೀವನ ಫುಲ್ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಭೀಕರ ಘಟನೆಗಳು ನಡೆದಿವೆ. ಮಳೆ ಆರಂಭವಾದಾಗಿನಿಂದ ಇದುವರೆಗೆ ಸಿಡಿಲು ಬಡಿದು ಒಟ್ಟು 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಮಿಳುನಾಡು ಕಂದಾಯ ಸಚಿವ ಕೆ.ಎ.ಸೆಂಗೋಟ್ಟೆಯನ್ ತಿಳಿಸಿದ್ದಾರೆ.
ಸಂತ್ರಸ್ತರಿಗೆ ನೆರವಾಗಲು ಸರ್ಕಾರ ತಕ್ಷಣವೇ ಮುಂದಾಗಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ. ಆದರೆ, ಒಂದೇ ದಿನದಲ್ಲಿ 35 ಜನ ತೀರಿಕೊಂಡಿದ್ದಾರೆ ಅಂತ ಮಾಧ್ಯಮಗಳಲ್ಲಿ ಬಂದಿದ್ದ ವರದಿಗಳನ್ನು ಸಚಿವರು ತಳ್ಳಿಹಾಕಿದ್ದು, ಬಾಕಿ ಪ್ರಕರಣಗಳ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಟ್ಟಗುಡ್ಡಗಳ ಪ್ರದೇಶವಾದ ನೀಲಗಿರಿ ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಬರೋಬ್ಬರಿ 62 ಕಡೆಗಳಲ್ಲಿ ಭೂಕುಸಿತ ಸಂಭವಿಸಿತ್ತು. ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ರಸ್ತೆಗಳನ್ನು ಕ್ಲಿಯರ್ ಮಾಡಿದ್ದಾರೆ. ದುರಂತವೆಂದರೆ, ಸಂಚರಿಸುತ್ತಿದ್ದ ಬಸ್ ಮೇಲೆ ಬಂಡೆಕಲ್ಲು ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಕಂಡಕ್ಟರ್‌ಗೆ ಮೂಳೆ ಮುರಿತವಾಗಿದೆ. ಚಾಲಕನ ಕುಟುಂಬಕ್ಕೂ 4 ಲಕ್ಷ ರೂ. ಪರಿಹಾರ ನೀಡಲಾಗಿದೆ.
ಇನ್ನು ಕೊಯಮತ್ತೂರು ಮತ್ತು ತಿರುಪ್ಪೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದ ರಸ್ತೆಗಳಲ್ಲೆಲ್ಲಾ ನೀರು ತುಂಬಿಕೊಂಡಿತ್ತು. ಆದರೆ, ಮುಂಜಾನೆ 4 ಗಂಟೆ ಹೊತ್ತಿಗಾಗಲೇ ನೀರನ್ನು ಹೊರಹಾಕಿ ವಾಹನ ಸಂಚಾರಕ್ಕೆ ಹಾದಿ ಮಾಡಿಕೊಡಲಾಗಿದೆ.
ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನೀಲಗಿರಿ (ಊಟಿ), ಕೊಡೈಕೆನಾಲ್ ಮತ್ತು ಯೆರ್ಕಾಡ್ ಬೆಟ್ಟಗಳ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೋಗದಂತೆ ನಿರ್ಬಂಧ ಹೇರಲಾಗಿದೆ. ಸ್ಥಳೀಯರಿಗೆ ಮಾತ್ರ ಬೆಳಗಿನ 6 ರಿಂದ ಸಾಯಂಕಾಲ 6 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಪಾಸ್ ಆಧಾರದ ಮೇಲೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ನಾಗಪಟ್ಟಿನಂನಲ್ಲಿ ಸುಮಾರು 3,500 ಎಕರೆ ಬೆಳೆ ನೀರಿನಲ್ಲಿ ಮುಳುಗಡೆಯಾಗಿದ್ದು, ಕೊಡೈಕೆನಾಲ್‌ನ ಹಲವು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. (ಏಜೆನ್ಸೀಸ್)