ಬೆಂಗಳೂರು: ಕೇಂದ್ರದ 2023-24ನೇ ಸಾಲಿನ ಬಜೆಟ್ನಲ್ಲಿ ಜನರು ಖುಷಿ ಪಡುವಂಥದ್ದೇನೂ ಇಲ್ಲ. ಪ್ರಧಾನಿ ನರೇಂದ್ರ ಅವರ ಅಧಿಕಾರಾವಧಿಯ ಕೊನೆಯ ಬಜೆಟ್ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮನಮೋಹನ್ ಸಿಂಗ್ 2014ರಲ್ಲಿ ಪ್ರಧಾನಿಯಾಗಿದ್ದ ಕೊನೆಯ ವರ್ಷದಲ್ಲಿ ಭಾರತದ ಸಾಲದ ಮೊತ್ತ 54.90 ಲಕ್ಷ ಕೋಟಿ ರೂ. ಇತ್ತು. ಆದರೆ ಪ್ರಧಾನಿ ಮೋದಿ ಆಡಳಿತದ ಹತ್ತು ವರ್ಷಗಳ ಅವಧಿಯಲ್ಲಿ 118 ಲಕ್ಷ ಕೋಟಿ ಸಾಲದ ಮೊತ್ತ ತಲುಪಿದೆ ಎಂದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಕರ್ನಾಟಕಕ್ಕೆ ಏನೂ ಕೊಡುಗೆ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದಾರೆ. ಆದರೆ, ಯೋಜನೆಗೆ ಇನ್ನೂ ನೋಟಿಫಿಕೇಷನ್ ಆಗಿಲ್ಲ. ಹೀಗಾಗಿ ಒಂದು ರೂಪಾಯಿಯನ್ನೂ ವೆಚ್ಚ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಈ ಬಾರಿಯ ಬಜೆಟ್ನಲ್ಲಿ ಕೃಷಿ, ನೀರಾವರಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆಗೆ ಯಾವುದೇ ಒತ್ತು ನೀಡಿಲ್ಲ. ಆಹಾರಕ್ಕೆ ನೀಡುವ ಸಬ್ಸಿಡಿಯಲ್ಲಿ ಈ ಬಾರಿ 90 ಸಾವಿರ ಕೋಟಿ ಕಡಿಮೆಯಾಗಿದೆ. ಮನ್ರೇಗಾದಲ್ಲಿ 29 ಸಾವಿರ ಕೋಟಿ ರೂ. ಇಳಿಕೆ ಮಾಡುವ ಮೂಲಕ ರೈತರಿಗೆ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದರು.