ನ್ಯೂಸ್

ಅನಿವಾಸಿ ಕನ್ನಡಿಗರ ನಾಟಕೋತ್ಸವ ಯಶಸ್ವಿ: ಕರ್ನಾಟಕ ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜನೆ

ಬೆಂಗಳೂರು: ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ನಾಟಕೋತ್ಸವ ಯಶಸ್ವಿಯಾಗಿದೆ. ಪ್ರದರ್ಶನಗೊಂಡ ವಿಭಿನ್ನ ಕಥಾ ಹಂದರವುಳ್ಳ ನಾಲ್ಕು ನಾಟಕಗಳು ಪ್ರೇಕ್ಷರನ್ನು ರಂಜಿಸಿದವು.

ಬಿ.ಎಲ್​. ಮುರುಳಿ ನಿರ್ದೇಶನದ "ಇಲ್ಲೊಂದು ಸಮಸ್ಯೆ ಇದೆ' ನಾಟಕ ಇಂದಿನ ಕಾಲಟ್ಟದ ಜನರು ಸಾಮಾಜಿಕ ಜಾಲತಾಣ, ಅಂತರ್ಜಾಲ ಹಾಗೂ ತಂತ್ರಜ್ಞಾನವನ್ನು ಎಷ್ಟು ಅವಲಂಬಿಸಿದ್ದಾರೆ. ಈ ವ್ಯವಸ್ಥೆಗಳಿಲ್ಲದಿದ್ದರೆ ಹೇಗೆ ಚಡಪಡಿಸುತ್ತಾರೆ ಎಂಬುದನ್ನು ಪ್ರದರ್ಶಿಸಿತು. ಮದುವೆಯಾದ ನಂತರದ ದಿನಗಳಲ್ಲಿ ಹೆಣ್ಣು ಎದುರಿಸುವ ಸಮಸ್ಯೆಗಳ ಬಗ್ಗೆ ಪವನ್​ ಜಾನಕಿರಾಮ್​ ರಚಿಸಿ, ಶಿವ ಸುಬ್ರಮಣ್ಯ ನಿರ್ದೇಶಿಸಿದ "ಆಂಟಿ' ನಾಟಕ ತಿಳಿಸಿಕೊಟ್ಟಿತು.

ಕೆ.ಪಿ. ಮೋಹನಚಂದ್ರ ನಿರ್ದೇಶನದ "ನಮ್ಮ ಮಗನಿಗೆ ಒಂದು ಹೆಣ್ಣು ಕೊಡಿ' ನಾಟಕ ಇಂದಿನ ಪರಿಸ್ಥಿತಿಯಲ್ಲಿ ಮದುವೆಗೆ ಕನ್ಯೆ ಸಿಗುವುದು ಎಷ್ಟು ಕಷ್ಟ ಎಂಬುದನ್ನು ಬಿಂಬಿಸಿತು. ಗುರುಪ್ರಸಾದ್​ ರಾವ್​ ನಿರ್ದೇಶನದ "ರೈಲು ಭೂತ' ನಾಟಕ ಪ್ರದರ್ಶನಗೊಂಡವು.

ನಾಟಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲೆ ಹಾಗೂ ಕನ್ನಡ ಕೂಟದಿಂದ ಆಯೋಜಿಸಿದ್ದ ಆಟೋಟಗಳ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕರ್ನಾಟಕ ಸಾಂಸ್ಕೃತಿ ಸಂಘದ ಅಧ್ಯಕ್ಷ ಅನಂತ್​ ಪ್ರಸಾದ್​ ಅಧ್ಯಕ್ಷತೆ ವಹಿಸಿದ್ದರು. ನಾಟಕೋತ್ಸವದ ಸಂಯೋಜಕ ಮಹೇಶ್​ ಅಲಂಪಳ್ಳಿ, ಕರ್ನಾಟಕ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು, ನಾಟಕೋತ್ಸವದಲ್ಲಿ 400ಕ್ಕೂ ಅಧಿಕ ಅನಿವಾಸಿ ಕನ್ನಡಿಗರು ಪಾಲ್ಗೊಂಡಿದ್ದರು.