ನೋಯ್ಡಾ: ಕರೊನಾ ವೈರಸ್ ಇಡೀ ಜಗತ್ತಿಗೇ ಅಪಾಯವನ್ನು ತಂದೊಡ್ಡಿದೆ. ಮಹಾಮಾರಿಯ ನಿಯಂತ್ರಣಕ್ಕಾಗಿ ಭಾರತ ಸೇರಿ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಲಾಕ್ಡೌನ್ನಂತಹ ಕ್ರಮ ಅನುಸರಿಸಲಾಗುತ್ತಿದೆ.
ಗುಂಪುಸೇರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಲಾಗುತ್ತಿದೆ. ಕರೊನಾ ಭಯದಿಂದ ದೇವಸ್ಥಾನ, ಚರ್ಚ್, ಕೆಲವು ಮಸೀದಿಗಳನ್ನು ಮುಚ್ಚಲಾಗಿದೆ. ಆದರೆ ದುರಂತವೆಂದರೆ ಇನ್ನೂ ಹಲವರು ಕರೊನಾ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ಇರುವುದು.
ಇತ್ತೀಚೆಗೆ ದೆಹಲಿಯ ನಿಜಾಮುದ್ದೀನ್ ಮರ್ಖಜ್ನಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಕರೊನಾ ವೈರಸ್ ತಗುಲಿದೆ. ಅಷ್ಟಾದರೂ ಆ ಸಮುದಾಯ ಮಾತ್ರ ಗುಂಪು ಸೇರುವುದನ್ನು, ಎಲ್ಲರೂ ಒಟ್ಟಾಗಿ ನಮಾಜ್ ಮಾಡುವುದನ್ನು ಬಿಡುತ್ತಿಲ್ಲ.
ಉತ್ತರಪ್ರದೇಶದ ನೊಯ್ಡಾದಲ್ಲಿ ಮಸೀದಿಯೊಂದರಲ್ಲಿ ಶುಕ್ರವಾರ ಗುಂಪಾಗಿ ಸೇರಿ ನಮಾಜ್ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಲಾಕ್ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ.
ನೊಯ್ಡಾದ ಕರೌಂದಾ ಗ್ರಾಮದಲ್ಲಿ ಘಟನೆ ನಡೆದಿದೆ. ಇಲ್ಲಿನ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಗಾಗಿ ಸುಮಾರು 20-25 ಜನರು ಸೇರಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಖಾಕಿ ನೋಡುತ್ತಲೇ ನಮಾಜ್ ಮಾಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಅವರಲ್ಲಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕರೊನಾ ಸೋಂಕು ಪ್ರಸರಣ ಪ್ರಮಾಣ ಅತ್ಯಂತ ವೇಗವಾಗಿದೆ. ಓರ್ವ ಸೋಂಕಿತ 400 ಆರೋಗ್ಯವಂತರಿಗೆ ವೈರಸ್ ಹಬ್ಬಿಸಬಲ್ಲ. ಹೀಗಿರುವಾಗ ಸಾಮಾಜಿಕ ಅಂತರವೊಂದೇ ಪಾರಾಗಲು ಮಾರ್ಗ. ಎಷ್ಟೇ ಅರಿವು ಮೂಡಿಸಿದರೂ ಕೆಲವರು ಹೀಗೆ ಕಣ್ಣುತಪ್ಪಿಸಿ ಗುಂಪು ಸೇರುತ್ತಿರುವುದರ ಬಗ್ಗೆ ಪೊಲೀಸರೇ ಆತಂಕ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)