Cab Driver : ಕ್ಯಾಬ್ ಚಾಲಕ ಹಾಗೂ ಪ್ರಯಾಣಿಕರ ನಡುವೆ ನಡೆಯುವ ಘರ್ಷಣೆ ಸಹಜವಾಗಿರುವಂತ ಘಟನೆಯಾಗಿದೆ. ಆದರೆ ನೋಯ್ಡಾದಲ್ಲಿ ಕ್ಯಾಬ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರ ಗುಂಪಿನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೋಲಿನಿಂದ ಹಲ್ಲೆ ಮಾಡಲು ಯತ್ನಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ.
ಪ್ರಯಾಣಿಕ ಗುಪ್ತಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಪ್ರಕಾರ, ನಾಲ್ವರು ಮಹಿಳೆಯರು ಬೊಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣದಿಂದ ತಮ್ಮ ಕಚೇರಿ ಇರುವ ಕಡೆ ಊಬರ್ ಬುಕ್ ಮಾಡಿದ್ದರು. ಈ ವೇಳೆ ನಾವು ಪ್ರಯಾಣಿಸುವ ಸಂದರ್ಭದಲ್ಲಿ ಭಾರೀ ಟ್ರಾಫಿಕ್ ಇರುವುದರಿಂದ ಚಾಲಕನಿಗೆ ಅಂಡರ್ಪಾಸ್ ತೆಗೆದುಕೊಳ್ಳುವಂತೆ ಕೇಳಿದ್ದಾರೆ. ಇವರು ಪದೇ ಪದೇ ವಿನಂತಿಸಿದರು ಆತ ಯು-ಟರ್ನ್ ತೆಗೆದುಕೊಂಡು ಚಲಾಯಿಸುತ್ತಿದ್ದು, ಇದಕ್ಕೆ ಪ್ರಶ್ನಿಸಿದಾಗ ಚಾಲಕ ಕೋಪಗೊಂಡಿದ್ದಾನೆ.
ಇದಾದ ಬಳಿಕ ಮಹಿಳೆಯರಿಗೆ ಸದ್ದಿಲ್ಲದೆ ಕುಳಿತುಕೊಳ್ಳಿ, ನಾನು ನಕ್ಷೆಯ ಪ್ರಕಾರ ಮಾತ್ರ ಓಡಿಸುತ್ತೇನೆ ಎಂದು ಜೋರು ಧ್ವನಿಯಲ್ಲಿ ಹೇಳಿದ್ದಾನೆ. ಮಹಿಳೆಯರು ನಯವಾಗಿ ಮಾತನಾಡಲು ಕೇಳಿಕೊಂಡಾಗ ಆತ ನನಗಾಗಿ ಕೆಲಸ ಮಾಡಲು ಹತ್ತು ಮಂದಿ ಇದ್ದಾರೆ. ನಾನು 12-13 ಕಾರುಗಳಿವೆ ಸುಮ್ಮನೆ ಕುಳಿತುಕೊಳ್ಳಿ ಎಂದಿದ್ದಾನೆ.
ಇನ್ನು ಗುಪ್ತಾ ಅವರು ಕಾರಿನಿಂದ ಇಳಿಯುವ ಸಮಯದಲ್ಲಿ ಅವರನ್ನು ಚಾಲಕ ತಳ್ಳಿದ್ದು, ಹಣ ನೀಡುವಂತೆ ಒತ್ತಾಯಿಸಿದ್ದಾನೆ. ನಂತರ ಕಾರಿನ ಡಿಕ್ಕಿಯಿಂದ ಬಿಳಿ ರಾಡ್ ಹೊರ ತೆಗೆದು ಅವರಿಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದು, ನಿಮ್ಮಿಂದಾಗಿ ಜೈಲಿಗೆ ಹೋಗಲು ಕೂಡ ನಾನು ಸಿದ್ಧ ಎಂದಿದ್ದಾನೆ. ಅವನ ಮಾತುಗಳನ್ನು ಇವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿಯಲು ಪ್ರಾರಂಭಿಸಿದ್ದು, ಮೊಬೈಲ್ಗಳನ್ನು ಕಸಿದುಕೊಳ್ಳಲು ಮುಂದಾಗಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ಬಳಿಕ ಚಾಲಕನ ವಿರುದ್ಧ ನೋಯ್ಡಾ ಪೊಲೀಸರು ಕ್ರಮ ಕೈಗೊಂಡಿದ್ದು, , ಆರೋಪಿಯನ್ನು ಗುರುತಿಸಿ ಅರ್ಧ ಗಂಟೆಯೊಳಗೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆಗೆ ಉಬರ್ ಇಂಡಿಯಾ ಕೂಡ ಪ್ರತಿಕ್ರಿಯಿಸಿದ್ದು, ಇದು ಕಳವಳಕಾರಿಯಾಗಿದೆ. ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ನಾವು ನಿಮ್ಮ ಸುರಕ್ಷತೆಗೆ ಎಲ್ಲಕ್ಕಿಂತ ಹೆಚ್ಚಿನ ಆದ್ಯತೆ ನೀಡುತ್ತೇವೆ. ದಯವಿಟ್ಟು ನಿಮ್ಮ ನೋಂದಾಯಿತ ಉಬರ್ ಖಾತೆಯ ಸಂಪರ್ಕ ವಿವರಗಳನ್ನು ನೇರ ಸಂದೇಶದ ಮೂಲಕ ಕಳುಹಿಸಿ. ನಮ್ಮ ಸುರಕ್ಷತಾ ತಂಡವು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತದೆ" ಎಂದು ತಿಳಿಸಿದೆ. (ಏಜೆನ್ಸೀಸ್)