ಹೈಕೋರ್ಟ್​  
ನ್ಯೂಸ್

ಮಕ್ಕಳ ಬಿಕ್ಷಾಟನೆ ತಡೆಗೆ ನೋಡಲ್​ ಅಧಿಕಾರಿ ನೇಮಕ| High court

ಪ್ರಮುಖ ಮುಖ್ಯಾಂಶಗಳು

  • ಆದೇಶ ಪಾಲಿಸುವಂತೆ ಹೈಕೋರ್ಟ್​ ತಾಕೀತು
  • ಸಮಿತಿ ರಚಿಸಿರುವ ಮಾಹಿತಿ ನೀಡಿದ ರಾಜ್ಯ ಸರ್ಕಾರ
ಬೆಂಗಳೂರು: ನಗರದ ರಸ್ತೆ ಮತ್ತು ಸಂಚಾರ ಸಿಗ್ನಲ್​ಗಳಲ್ಲಿ ಕಂಡುಬರುವ ಮಕ್ಕಳ ಬಿಕ್ಷಾಟನೆ ಮತ್ತು ಮಕ್ಕಳಿಂದ ವಿವಿಧ ವಸ್ತುಗಳನ್ನು ಮಾರಾಟ ಮಾಡಿಸುವ ಜಾಲವನ್ನು ತಡೆಯಲು ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ನೋಡಲ್​ ಅಧಿಕಾರಿಯನ್ನು ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಮಂಗಳವಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಕುರಿತು ಜ.22ರಂದೇ ನ್ಯಾಯಾಲಯ ನಿರ್ದೇಶನ ನೀಡಿದ್ದರೂ, ಈವರೆಗೆ ಪಾಲನೆಯಾಗದಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಲೆಟ್ಜ್​ಕಿಟ್​ ಫೌಂಡೇಶನ್​ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್​) ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಬಿಕ್ಷಾಟನೆ ತಡೆಗೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ನೋಡಲ್​ ಅಧಿಕಾರಿಯ ನೇಮಕ ಅಗತ್ಯ. ಮೊದಲು ಅಧಿಕಾರಿಯನ್ನು ನೇಮಿಸಿ ನಂತರ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸಿ, ಆದೇಶವನ್ನು ಪಾಲಿಸಿ ಎಂದು ಮೌಖಿಕವಾಗಿ ನಿರ್ದೇಶನ ನೀಡಿತು.
ಇದೇ ವೇಳೆ ಜ.22ರಂದು ನ್ಯಾಯಾಲಯ ನೀಡಿದ್ದ ಪ್ರಮುಖ ಆದೇಶವನ್ನು ವೆಬ್​ಸೈಟ್​ನಲ್ಲಿ ಅಪ್ಲೋಡ್​ ಮಾಡದಿರುವ ಬಗ್ಗೆ ಹೈಕೋರ್ಟ್​ನ ರಿಜಿಸ್ಟ್ರಿಯಿಂದ ನ್ಯಾಯಪೀಠ ವಿವರಣೆ ಕೋರಿದೆ. ಆದೇಶದ ಪ್ರತಿ ಲಭ್ಯವಿಲ್ಲದ ಕಾರಣ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ ಎಂಬ ಸರ್ಕಾರದ ವಾದವನ್ನು ಗಮನಿಸಿದ ಪೀಠವು ಈ ವಿಳಂಬಕ್ಕೆ ಕಾರಣವೇನು ಎಂದು ಪ್ರಶ್ನಿಸಿದೆ.

ಕ್ರೀಯಾಯೋಜನೆ ಸಲ್ಲಿಸಿಲ್ಲ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್​ಎಲ್​ಎಸ್​ಎ) ಪರ ವಕೀಲರು ವಾದ ಮಂಡಿಸಿ, ಬಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ತಾತ್ಕಾಲಿಕ ಶಾಲೆಗಳು, ಅಂಗನವಾಡಿಗಳ ಸ್ಥಾಪನೆ ಮತ್ತು ಪೊಲೀಸ್​ ತನಿಖೆಗೆ ಶಿಫಾರಸು ಮಾಡಲಾಗಿತ್ತು. ಆದರೆ, ಈ ಬಗ್ಗೆ ಸರ್ಕಾರವು ಈವರೆಗೆ ಯಾವುದೇ ಕ್ರಿಯಾಯೋಜನೆ ಸಲ್ಲಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಲಸೆ ಕಾರ್ಮಿಕರ ಮಕ್ಕಳು ಅಥವಾ ಭಿಕ್ಷಾಟನೆಯಿಂದ ಮುಕ್ತರಾದ ಮಕ್ಕಳು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಾಲೆಗೆ ಸೇರಬಯಸಿದರೆ, ಯಾವುದೇ ಶಿಕ್ಷಣ ಸಂಸ್ಥೆಗಳು ಪ್ರವೇಶ ನಿರಾಕರಿಸಬಾರದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡುವಂತೆಯೂ ಅರ್ಜಿದಾರರು ಕೋರಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಜೂ.17ಕ್ಕೆ ನಿಗದಿಯಾಗಿದೆ.

ಸಮಿತಿ ರಚನೆ ಮಾಡಿರುವ ಸರ್ಕಾರ

ಮಕ್ಕಳ ಬಿಕ್ಷಾಟನೆ ತಡೆ ಬಗ್ಗೆ ಕಾರ್ಯನಿರ್ವಹಿಸಲು 12 ಸದಸ್ಯರ ಸಮಿತಿಯನ್ನು ಮಾ.9ರಂದು ರಚಿಸಲಾಗಿದೆ ಎಂದು ಸರ್ಕಾರವು ಪೀಠಕ್ಕೆ ತಿಳಿಸಿದೆ. ಈ ಸಮಿತಿಯಲ್ಲಿ ನಿಮಾನ್ಸ್​ನ ತಜ್ಞ ವೈದ್ಯರು, ಪೊಲೀಸ್​ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಇತರ ಸಮಾಜ ಸೇವಾ ಸಂಟನೆಗಳ ಪ್ರತಿನಿಧಿಗಳಿದ್ದು, ಮಾ.18ರಂದು ಮೊದಲ ಸಭೆ ನಡೆದಿದೆ ಎಂದು ಮಾಹಿತಿ ನೀಡಿತು.

ಸೆಸ್​ ಮೊತ್ತದ ಗೊಂದಲ 

ಬಿಕ್ಷಾಟನೆ ಸೆಸ್​ ಎಂದು ಸಂಗ್ರಹಿಸಿರುವ ಮೊತ್ತವನ್ನು ಎಸ್ಕ್ರೊ ಖಾತೆಯಲ್ಲಿ ಇರಿಸಲಾಗಿದ್ದು, ಅದು ನೇರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೋಗುತ್ತದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು, ಬಿಕ್ಷುಕರ ಸೆಸ್​ ಎಂದು ಒಟ್ಟು 7 ಕೋಟಿ ರೂ. ಸಂಗ್ರಹವಾಗಿದ್ದರೂ ಕೇವಲ 3 ಕೋಟಿ ರೂ. ಮಾತ್ರ ಖಾತೆಗೆ ವರ್ಗಾವಣೆಯಾಗಿದೆ ಎಂದು ತಿಳಿಸಿದರು. ಇದನ್ನು ಆಲಿಸಿದ ನ್ಯಾಯಪೀಠ, ಸಂಗ್ರಹಿಸಲಾಗಿರುವ "ಬಿಕ್ಷಾಟನೆ ಸೆಸ್​' ಎಷ್ಟು ಮತ್ತು ಅದನ್ನು ಹೇಗೆ ಬಳಸಲಾಗಿದೆ ಎಂಬುದರ ಬಗ್ಗೆ ಸಮಗ್ರ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.