ನ್ಯೂಸ್

ಮುಂದಿನ ವರ್ಷ ಸರ್ಕಾರ ಗಣಪತಿ ಹಬ್ಬವನ್ನೇ ಬ್ಯಾನ್ ಮಾಡಿದರೂ ಆಶ್ಚರ್ಯವಿಲ್ಲ: ಆರ್​.ಅಶೋಕ ಕಿಡಿ | Ganpati festival

Ganpati festival: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ನಿಗಿ ನಿಗಿ ಕೆಂಡಕಾರುತ್ತಿದ್ದಾರೆ. ಮುಂದಿನ ವರ್ಷ ಸರ್ಕಾರ ಗಣಪತಿ ಹಬ್ಬವನ್ನೇ ಬ್ಯಾನ್ ಮಾಡಿದರೂ ಆಶ್ಚರ್ಯವಿಲ್ಲ ಎಂದು ವಿಪಕ್ಷ ನಾಯಕ ಆರ್​.ಅಶೋಕ ಕಿಡಿಕಾರಿದ್ದಾರೆ.

ಈ ಕುರಿತು ಬಿಜೆಪಿ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, '' ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಕಲ್ಲುತೂರಾಟದ ವಿರುದ್ಧ ಪ್ರತಿಭಟಿಸಿದ ಹಿಂದೂಗಳ ಮೇಲೆ ಕಾಂಗ್ರೆಸ್‌ನಿಂದ ಲಾಠಿ ಚಾರ್ಜ್! ಅದೇ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಏಕೆ ತೆಗೆದುಕೊಂಡಿಲ್ಲ?'' ಎಂದಿದ್ದಾರೆ.

ಚಾಮುಂಡೇಶ್ವರಿ ಬೆಟ್ಟ, ಧರ್ಮಸ್ಥಳ ಮತ್ತು ಮದ್ದೂರು ಘಟನೆಗೆ ಸಿದ್ದರಾಮಯ್ಯ ಜನರ ಕ್ಷಮೆಯಾಚಿಸಬೇಕು. ಈ ಬಾರಿ ಗಣಪತಿ ಹಬ್ಬಕ್ಕೆ ವಿವಿಧ ಷರತ್ತುಗಳನ್ನು ಹಾಕಿದ ಕಾಂಗ್ರೆಸ್ ಸರ್ಕಾರ ಮುಂದಿನ ವರ್ಷ ಗಣಪತಿ ಹಬ್ಬವನ್ನೇ ಬ್ಯಾನ್ ಮಾಡಿದರೂ ಆಶ್ಚರ್ಯವಿಲ್ಲ! ಎಂದು ಹರಿಹಾಯ್ದಿದ್ದಾರೆ.

ಗಣೇಶ ವಿಸರ್ಜನೆ ಸಂದರ್ಭದಲ್ಲಾದ ಘಟನೆಗಳನ್ನು ಸಣ್ಣಪುಟ್ಟ ಘಟನೆ ಎನ್ನುವ ಗೃಹ ಸಚಿವರ ಹೇಳಿಕೆ ಆಯೋಗ್ಯತನದಿಂದ ಕೂಡಿದೆ. ಕೋಮುಗಲಭೆಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಪೊಲೀಸ್ ಇಲಾಖೆಯನ್ನು ಸರ್ಕಾರ ನಿಶ್ಶಕ್ತಗೊಳಿಸಿದೆ. ರಾಜ್ಯ ಸರ್ಕಾರದ ಪಾಪದ ಕೊಡ ತುಂಬಿದೆ. ನಾಳೆ ದೆಹಲಿಯಿಂದ ಮರಳುತ್ತಿದ್ದಂತೆ ಪಕ್ಷದ ಮುಖಂಡರೊಂದಿಗೆ ಮದ್ದೂರಿಗೆ ಭೇಟಿ ನೀಡಿ ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬುತ್ತೇನೆ. | ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.