ನ್ಯೂಸ್

ಎಚ್​ಐವಿ ರೋಗಿಯ ಶವ ಸಾಗಿಸೋಕೆ ವಾಹನಗಳೇ ಸಿಗಲಿಲ್ಲ- ಕೊನೆಗೆ ಸೈಕಲ್​ ಮೇಲೆ ಹೊತ್ತೊಯ್ಯ ಬೇಕಾಯಿತು..

ಹೈದರಾಬಾದ್​: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ 44 ವರ್ಷದ ಎಚ್​ಐವಿ ರೋಗಿಯೊಬ್ಬ ಶನಿವಾರ ರಾತ್ರಿ ಮೃತಪಟ್ಟಿದ್ದು, ಆತನ ಶವ ಸಾಗಿಸಲು ವಾಹನಗಳೇ ಸಿಗಲಿಲ್ಲ. ಲಾಕ್​ಡೌನ್ ಕಾರಣದಿಂದ ವಾಹನಗಳು ಸಿಗದ ಕಾರಣ ಕೊನೆಗೆ ಪೊಲೀಸರು ಪೌರಕಾರ್ಮಿಕರ ನೆರವಿನೊಂದಿಗೆ ಸೈಕಲ್​ ಮೇಲೆ ಶವವನ್ನು ಸಾಗಿಸಿ ಆಸ್ಪತ್ರೆಗೆ ತಲುಪಿಸಿದ ಘಟನೆ ಭಾನುವಾರ ನಡೆದಿದೆ.

ವ್ಯಕ್ತಿಗೆ ಕಳೆದ ಕೆಲವು ವರ್ಷಗಳಿಂದ ಎಚ್​ಐವಿ ಇದ್ದು, ಬಡವರಿಗಾಗಿ ಇರುವ ನಿರಾಶ್ರಿತರ ತಾಣದಲ್ಲಿದ್ದರು. ಶನಿವಾರ ರಾತ್ರಿ ಅಲ್ಲಿ ಮೃತಪಟ್ಟಿದ್ದಾರೆ. ಶವದಿಂದ ಕೆಟ್ಟ ವಾಸನೆ ಬರತೊಡಗಿದಾಗ ಪೊಲೀಸರಿಗೆ ಮಾಹಿತಿ ಹೋಗಿದೆ. ಪೋಸ್ಟ್​ಮಾರ್ಟಂಗಾಗಿ ಆಸ್ಪತ್ರೆಗೆ ಸಾಗಿಸುವುದಕ್ಕೆ ಯಾರೂ ನೆರವಾಗಲಿಲ್ಲ. ವಾಹನವೂ ಸಿಗಲಿಲ್ಲ.

ಹೀಗಾಗಿ ಕೊನೆಗೆ ಪೌರಕಾರ್ಮಿಕ ನೆರವು ಕೋರಲಾಗಿದೆ. ಆ್ಯಂಬುಲೆನ್ಸ್​ನವರೂ ಸಿಗದ ಕಾರಣ, ಬೆಡ್​ಶೀಟ್​ನಲ್ಲಿ ವ್ಯಕ್ತಿಯ ಶವವನ್ನು ಸುತ್ತಿ ಸೈಕಲ್​ ಮೇಲೆ ಇಟ್ಟು ಆಸ್ಪತ್ರೆಗೆ ಪೌರಕಾರ್ಮಿಕರೇ ಸಾಗಿಸಿಕೊಟ್ಟಿದ್ದಾರೆ. ವ್ಯಕ್ತಿ ನಿರ್ಮಲ್ ಜಿಲ್ಲೆಯವರಾಗಿದ್ದು, ಅವರ ಕುಟುಂಬದವರಿಗೆ ಸಾವಿನ ಸುದ್ದಿ ತಲುಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)