ನ್ಯೂಸ್

ಯುಗಾದಿ ಇಲ್ಲ ಬೆಲೆ ಏರಿಕೆ ಬೇಗುದಿ

ಬೆಂಗಳೂರು: ಯುಗಾದಿ ಬಂತೆಂದರೆ ಮಾರುಕಟ್ಟೆ, ಬಟ್ಟೆ ಅಂಗಡಿ, ದಿನಸಿ ಅಂಗಡಿ ಹೀಗೆ ಎಲ್ಲೆಡೆ ವ್ಯಾಪಾರ ಜೋರು. ಆದರೆ ಈ ಬಾರಿ ಬಿಸಿಲ ತೀವ್ರತೆ ಹಾಗೂ ಮಾಸಾಂತಕ್ಕೆ ಹಬ್ಬ ಬಂದಿರುವುದರಿಂದ ಜನರಲ್ಲಿ ಹಬ್ಬದ ಉತ್ಸಾಹ ಕೊಂಚ ತಗ್ಗಿದೆ. ಆದರೂ ದರ ಇಳಿಕೆ ಗ್ರಾಹಕರಲ್ಲಿ ಸಂತಸ ತಂದಿದ್ದರೆ, ವ್ಯಾಪಾರಿಗಳಲ್ಲಿ ನಿರಾಸೆ ಮೂಡಿಸಿದೆ. ಮಳೆ ಇಲ್ಲದ ಕಾರಣ ಹೂ- ಹಣ್ಣು, ತರಕಾರಿ ಬೆಳೆಯಲ್ಲಿ ಸಮಸ್ಯೆ ಇಲ್ಲದಿದ್ದರೂ ಬಿಸಿಲಿನಿಂದಾಗಿ ಹೆಚ್ಚು ದಿನ ಉಳಿಯುತ್ತಿಲ್ಲ. ಹಾಗಾಗಿ ಹಾಳಾ ದರೆ ಹಾಕಿದ ಬಂಡವಾಳವೂ ಬರುವುದಿಲ್ಲವೆಂದು ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮಾವು- ಬೇವು ಎಂದಿನಂತೆ 20- 30 ರೂ. ಇದ್ದು, ಉಳಿದಂತೆ ಹೂವು, ಹಣ್ಣು ಮತ್ತು ತರಕಾರಿ ದರವೂ ಇಳಿಕೆಯಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ದರ ಹೆಚ್ಚಳ ಆಗುತ್ತದೆ ಎಂಬ ಕಾರಣಕ್ಕೆ 2-3 ದಿನ ಮುಂಚಿತವಾಗಿ ಮಾರುಕಟ್ಟೆಗೆ ಖರೀದಿಗೆ ಆಗಮಿಸುತ್ತಿದ್ದ ಮಂದಿ, ಇತ್ತೀಚಿನ ವರ್ಷಗಳಲ್ಲಿ ಅಂತಹ ಉತ್ಸಾಹ ತೋರುತ್ತಿಲ್ಲ. ಕಾರಣ ಬಡಾವಣೆಗಳಲ್ಲೇ ಎಲ್ಲವೂ ದೊರೆಯತ್ತದೆ. ಅಲ್ಲದೆ ಈಗೆಲ್ಲ ಜನರು ಆನ್​ಲೈನ್ ಮೂಲಕ ಮನೆಬಾಗಿಲಿಗೆ ಎಲ್ಲವನ್ನೂ ತರಿಸಿಕೊಳ್ಳುವುದರಿಂದ ಮಾರುಕಟ್ಟೆ ವರೆಗೂ ಬರುವವರ ಸಂಖ್ಯೆ ತಗ್ಗಿದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ಹಣ್ಣು ಮತ್ತು ತರಕಾರಿ ವ್ಯಾಪಾರಿ ಅಣ್ಣಮ್ಮ. ಒಂದೆಡೆ ಬಿಸಿಲಿನ ತೀವ್ರತೆಗೆ ಜನರು ಹೊರಬರಲು ಯೋಚಿಸುತ್ತಿದ್ದರೆ, ಮತ್ತೊಂದೆಡೆ ಶಾಲಾ- ಕಾಲೇಜುಗಳಲ್ಲಿ ಪರೀಕ್ಷೆ ಮುಗಿದು ರಜೆ ಇರುವುದರಿಂದ ಬಹುತೇಕ ನಗರ ವಾಸಿಗಳು ಹಬ್ಬದ ಆಚರಣೆಗೆ ಸ್ವಂತ ಊರುಗಳಿಗೆ ತೆರಳುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಕಡಿಮೆ ಯಾಗಿದೆ. ಅಲ್ಲದೆ ಹಬ್ಬ ಭಾನುವಾರ ಬಂದಿರುವುದರಿಂದ ಬೇಗನೆ ಖರೀದಿ ಮಾಡಿದರೆ ಬಿಸಿಲಿಗೆ ಬಾಡಿ ಹೋಗುತ್ತವೆ ಎಂಬ ಕಾರಣದಿಂದಾಗಿ ಹಿಂದಿನ ದಿನ ಅಥವಾ ಹಬ್ಬದ ದಿನದಂದೇ ತಂದರಾಯಿತು ಎಂಬ ಆಲೋಚನೆಯಲ್ಲಿ ಗ್ರಾಹಕರು ಇರಬಹುದು ಎನ್ನುತ್ತಾರೆ ವ್ಯಾಪಾರಿ ಸುಂದರ್.

ಬಾಡುತ್ತಿರುವ ಹಣ್ಣು ತರಕಾರಿ

ಹಬ್ಬದಲ್ಲಿ ಬಾಳೆಹಣ್ಣು ಮತ್ತು ಬಾಳೆ ಎಲೆಗೆ ಎಲ್ಲಿಲ್ಲದ ಬೇಡಿಕೆ. ಪೂಜೆಗೆ ಬಾಳೆ ಹಣ್ಣು ಕಡ್ಡಾಯವಾಗಿದ್ದರೆ, ಹಬ್ಬದೂಟ ಸವಿಯಲು ಬಾಳೆ ಎಲೆ ಕೊಳ್ಳುವವರೂ ಇದ್ದಾರೆ. ಆದರೆ ಈ ಬಾರಿ ಬೇಡಿಕೆ ಇದ್ದರೂ, ಬೆಲೆ ಇಲ್ಲದಂತಾಗಿದೆ. ಬಿಸಿಲ ತಾಪಕ್ಕೆ ಬಾಳೆಹಣ್ಣು ಬೆಳೆ ಬೇಗ ಕೊಯ್ಲಿಗೆ ಬರುತ್ತಿದೆ. ಜತೆಗೆ ಕೊಯ್ಲು ಮಾಡಿದ ಬಾಳೆ, ಮಾಗಿದ ಕೂಡಲೇ ಹೊರಗಡೆ ಇದ್ದರೆ ಒಂದೇ ದಿನದಲ್ಲಿ ಹಣ್ಣಾಗುತ್ತದೆ. 2-3 ದಿನ ಕಳೆದರೆ ಸಿಪ್ಪೆ ಕಪ್ಪಾಗುತ್ತದೆ. ಹಾಗಾಗಿ ಬಂದಷ್ಟು ಬರಲಿ ಎನ್ನುವಂತಾಗಿದೆ ವ್ಯಾಪಾರಿಗಳ ಸ್ಥಿತಿ. ಹಣ್ಣು ಹೆಚ್ಚು ದಿನ ಇಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಗ್ರಾಹಕರೂ ಸಹ ಹೆಚ್ಚು ಹಣ್ಣು ಖರೀದಿಸುತ್ತಿಲ್ಲ. ಇದರಿಂದಾಗಿ ಎರಡು ತಿಂಗಳ ಹಿಂದೆ ಸಗಟು ದರದಲ್ಲಿ ಕೆ.ಜಿ.ಗೆ 100-120 ರೂ. ಇದ್ದ ಏಲಕ್ಕಿ ಬಾಳೆ ಇದೀಗ 50-70 ರೂ.ಗೆ ಇಳಿಕೆಯಾಗಿದೆ. ಪಚ್ಚಪಾಳೆ ಕೆ.ಜಿ.ಗೆ 20-30 ರೂ.ಗೆ ಮಾರಾಟವಾಗುತ್ತದೆ. ಇದಲ್ಲದೆ ಬಾಳೆ ಎಲೆ, ಹಣ್ಣು ತರಕಾರಿ ವ್ಯಾಪಾರಿಗಳಿಗೂ ಬಿಸಿಲ ಶಾಖ ತಟ್ಟಿದೆ.

ದಿನಸಿ ಖರೀದಿ

ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದು ಆಚರಿಸುವುದರಿಂದ ಹಬ್ಬದ ಅಡುಗೆಯಲ್ಲಿ ಹೋಳಿಗೆ ವಿಶೇಷ. ಹಾಗಾಗಿ ಜನರು ಅಡುಗೆಗೆ ಅಗತ್ಯವಾದ ತೊಗರಿಬೇಳೆ, ಬೆಲ್ಲ, ಸಕ್ಕರೆ, ಎಣ್ಣೆ ಸೇರಿ ಇತರೆ ದಿನಸಿ ಖರೀದಿಯಲ್ಲಿ ನಿರತರಾಗಿದ್ದರು. ಇದಲ್ಲದೆ ಹಬ್ಬದ ನಂತರ ಮಂಗಳವಾರ ವರ್ಷತೊಡಕು ಇರುವುದರಿಂದ ಗ್ರಾಹಕರು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ನಿಂಬೆಹಣ್ಣು, ಕೊತ್ತಂಬರಿ ಸೊಪು್ಪ, ಪುದೀನಾ, ಸೌತೆಕಾಯಿ, ತೆಂಗಿನಕಾಯಿ ಖರೀದಿ ಮಾಡುತ್ತಿದ್ದಾರೆ.

ಹೂವಿನ ದರವೂ ಇಳಿಕೆ

ಯುಗಾದಿ ಹಬ್ಬಕ್ಕೆ ಹೂವಿನ ಖರೀದಿ ಹೆಚ್ಚೇನು ಇರುವುದಿಲ್ಲ. ಅಲ್ಲದೆ ಇಳುವರಿ ಚೆನ್ನಾಗಿದ್ದು, ಬೇಡಿಕೆ ಕಡಿಮೆ ಇರುವುದರಿಂದ ಸೇವಂತಿಗೆ, ಗುಲಾಬಿ, ಸುಗಂಧರಾಜ, ಚೆಂಡು ಹೂ, ರುದ್ರಾಕ್ಷಿ ಹೂ, ಕಣಗಿಲೆ ಹೂ ದರ ಕಡಿಮೆ ಇತ್ತು. ಆದರೆ ಮಲ್ಲಿಗೆ ಹೂವಿನ ಋತು ಈಗಷ್ಟೇ ಆರಂಭವಾಗಿರುವುದರಿಂದ ಮಲ್ಲಿಗೆ ಹೂ ಹಾಗೂ ಮೊಗ್ಗಿನ ದರ ಕೆ.ಜಿ.ಗೆ 1,000- 1,400 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಲ್ಲಿಗೆ ಹೂ ಹೊರತುಪಡಿಸಿ ಉಳಿದ ಹೂಗಳ ದರ ಕಡಿಮೆ ಇದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆ ಸಗಟು ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ದಿವಾಕರ್.