ಬೆಂಗಳೂರು: ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಮಂಗಳವಾರ ಆರಂಭವಾದ ಕೌನ್ಸೆಲಿಂಗ್ ಕೆಲವೇ ಗಂಟೆಗಳಲ್ಲಿ ಸ್ಥಗಿತಗೊಂಡಿದೆ. ಕೌನ್ಸೆಲಿಂಗ್ ನಿಲ್ಲಲು ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಕೆಲ ರಾಜಕೀಯ ಕಾರಣಗಳಿಂದಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯೂ ಡೋಲಾಯಮಾನ ಸ್ಥಿತಿ ತಲುಪಿದೆ. ಪ್ರಸ್ತಕ ಸಾಲಿನಿಂದ ನಡೆಸುತ್ತಿರುವ 5, 8ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗೆ ಸಮಯ ಸಮೀಪಿಸುತ್ತಿರುವುದರಿಂದ ವರ್ಗಾವಣೆ ಪ್ರಕ್ರಿಯೆ ನಡೆಯುವುದು ಬಹುತೇಕ ಅನುಮಾನವಾಗಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುಂದೂಡುವ ಸಾಧ್ಯತೆಗಳಿವೆ. ಇದರಿಂದ ಹತ್ತಾರು ವರ್ಷಗಳಿಂದ ವರ್ಗಾವಣೆಗಾಗಿ ಕಾಯುತ್ತಿದ್ದ 25 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ನಿರಾಸೆ ಎದುರಾಗಿದೆ.
ಕೌನ್ಸೆಲಿಂಗ್ ಮುಖಾಂತರ ಹೆಚ್ಚುವರಿ ಶಿಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷದಿಂದಾಗಿ ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿ ನ್ಯೂನತೆಗಳಿದ್ದರೂ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಮಂಗಳವಾರ ನಡೆಯಬೇಕಿದ್ದ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಮತ್ತು ಮಂಗಳವಾರ ಜರುಗಿರುವ ಎಲ್ಲ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಚಿವರ ಸೂಚನೆ ಮೇರೆಗೆ, ಶಿಕ್ಷಕರಿಗೆ ಕೌನ್ಸೆಲಿಂಗ್ನಲ್ಲಿ ಸ್ಥಳ ನಿಯುಕ್ತಿ ಆದೇಶ ನೀಡಿದ್ದಲ್ಲಿ ಅಂಥ ಆದೇಶಗಳನ್ನು ಡಿಡಿಪಿಐಗಳು ರದ್ದುಗೊಳಿಸಿ ಹಿಂಪಡೆಯಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕವಾಗಿ ರದ್ದುಗೊಂಡಿದೆ.
ಬಡ್ತಿ ಬಳಿಕ ಪ್ರಕ್ರಿಯೆಗೆ ಒತ್ತಾಯಿಸಿದ್ದ ಶಿಕ್ಷಕರ ಸಂಘ: ಪ್ರಸ್ತುತ 8,500 ಪ್ರಾಥಮಿಕ ಮತ್ತು 2,000 ಪ್ರೌಢಶಾಲಾ ಶಿಕ್ಷಕರನ್ನು ಹೆಚ್ಚುವರಿ ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಪೈಕಿ ಅಂದಾಜು 1,300 ಸಹಶಿಕ್ಷಕರು ಮಾ.31ರೊಳಗೆ ನಿವೃತ್ತರಾಗಲಿದ್ದಾರೆ. ಇವರಿಗೆ ಬಡ್ತಿ ನೀಡಿ ವರ್ಗಾವಣೆ ಪ್ರಕ್ರಿಯೆ ಮುಂದುವರಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿತ್ತು.
ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿ ನ್ಯೂನತೆಗಳಿದ್ದರೂ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸುತ್ತಿರುವುದು ತಿಳಿಯಿತು. ಹೀಗಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ಮಂಗಳವಾರ ಜರುಗಿರುವ ಎಲ್ಲ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಸೂಚಿಸಿದ್ದೇನೆ. | ಬಿ.ಸಿ. ನಾಗೇಶ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಮುಂದಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅದಕ್ಕೂ ಮೊದಲು ಶಿಕ್ಷಕರಿಗೆ ಬಡ್ತಿ ನೀಡಬೇಕು. | ಚಂದ್ರಶೇಖರ ನುಗ್ಗಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ
ಗೊಂದಲ ಸರಿಪಡಿಸಿ ಕೌನ್ಸೆಲಿಂಗ್ ನಡೆಸಿ: ರಾಜ್ಯಾದ್ಯಂತ ಮಂಗಳವಾರ ಆರಂಭವಾದ ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ಗೆ ಸಂಬಂಧಿಸಿದಂತೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ. ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಸಂಖ್ಯೆಯನ್ನು ಕಳೆದ ವರ್ಷದ ಅಂಕಿ-ಅಂಶ ಪರಿಗಣಿಸಲಾಗಿದೆ. ಇದರಿಂದ ಅನೇಕ ಶಿಕ್ಷಕರಿಗೆ ಅನ್ಯಾಯವಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಆರೋಪಿಸಿತ್ತು. ಪ್ರಕ್ರಿಯೆಯನ್ನು ಮುಂದೂಡಿದ್ದರಿಂದ ರಾಜ್ಯಾದ್ಯಂತ ಹೆಚ್ಚುವರಿ ಶಿಕ್ಷಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಮುಂದೂಡಿಕೆ ಏಕೆ?: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಇದೇ ವರ್ಷ ಸತತ 2ನೇ ಬಾರಿ ರದ್ದುಗೊಂಡಿದೆ. 2022-23ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ನಡೆಸಲು ಶಿಕ್ಷಣ ಇಲಾಖೆ 2022ರ ಡಿ.22ರಂದು ವೇಳಾಪಟ್ಟಿ ಪ್ರಕಟಿಸಿತ್ತು. ಡಿ.28ರಂದು ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿ ಪ್ರಕಟಿಸಿದ್ದು, ಜ.11ರಂದು ಹೆಚ್ಚುವರಿ ಶಿಕ್ಷಕರ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿ ಜ.12ರಂದು ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ತಾಂತ್ರಿಕ ಕಾರಣ ನೀಡಿ ಜ.24ಕ್ಕೆ ಕೌನ್ಸೆಲಿಂಗ್ ಮುಂದೂಡಲಾಗಿತ್ತು. ತಾಂತ್ರಿಕ ಅಡ್ಡಿಗಳೇನು?: ಅಂಗವಿಕಲರು, ಪತಿ-ಪತ್ನಿ ಪ್ರಕರಣ, ಅನಾರೋಗ್ಯ ಸಂಬಂಧಿ ಮಾಹಿತಿಗಳು ಸೇರಿ ಶಿಕ್ಷಕರು ನೀಡುವ ಮಾಹಿತಿಯನ್ನು ಅಪ್ಲೋಡ್ ಮಾಡುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.