ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಸಂಯುಕ್ತ ರೈತ ಸಂಘದ ಪದಾಧಿಕಾರಿಗಳು ಎಸಿ ಕಚೇರಿಗೆ ಮನವಿ ಸಲ್ಲಿಸಿದರು. ಎಂ.ಬಿ.ಮಂಜಪ್ಪ, ಚಂದ್ರಶೇಖರ್, ದೇವು, ಅಜಿತ್, ಕೆ.ಟಿ.ರಮೇಶ್ ಇತರರಿದ್ದರು. 
ನ್ಯೂಸ್

ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ

ಸಾಗರ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಸಂಯುಕ್ತ ರೈತ ಸಂಘದ ಪದಾಧಿಕಾರಿಗಳು ಗುರುವಾರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಯೋಜನೆಯಿಂದ ಪರಿಸರ ನಾಶದ ಜತೆಗೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಪಂಪ್ಡ್ ಸ್ಟೋರೇಜ್ ಬಗ್ಗೆ ಸ್ಥಳೀಯವಾಗಿ ವಿರೋಧವಿದ್ದರೂ ಶಾಸಕರು ಸದನದಲ್ಲಿ ಪಂಪ್ಡ್ ಸ್ಟೋರೇಜ್‌ಗೆ ವಿರೋಧ ಇಲ್ಲ ಎಂದು ಹೇಳಿರುವುದು ಖಂಡನೀಯ. ಇಲ್ಲಿ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಿ ವಿದ್ಯುತ್ ಒಯ್ಯಲು 10 ಗ್ರಿಡ್‌ಗಳನ್ನು ಎಳೆಯಬೇಕು. ಆಗ ಅಪಾರ ಪ್ರಮಾಣದ ಪರಿಸರ, ಜಮೀನು, ವಸತಿಗಳು ನಾಶವಾಗುತ್ತವೆ. ಹಾಗಾಗಿ ಯೋಜನೆಯನ್ನು ಕೈಬಿಡಬೇಕು ಎಂದು ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ಒತ್ತಾಯಿಸಿದರು.

ಸಂಘದ ಮುಖಂಡ ಗೂರಲಕೆರೆ ಚಂದ್ರಶೇಖರ್ ಮಾತನಾಡಿ, ಶಾಸಕರು ತಮ್ಮ ಜಮೀನು ಇದ್ದರೆ ಯೋಜನೆಗಾಗಿ ಬಿಟ್ಟುಕೊಡಲಿ. ಆದರೆ ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ರೈತರು ಜಮೀನು ಬಿಟ್ಟುಕೊಟ್ಟಿದ್ದಾರೆ ಎಂದು ತಪ್ಪು ಸಂದೇಶ ಕೊಡಬೇಡಿ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕಮಿಷನ್ ಹೊಡೆಯಲು ಮಾತ್ರವೇ ವಿನಃ ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.

ರೈತ ಸಂಘದ ಹೊಯ್ಸಳ ಗಣಪತಿಯಪ್ಪ ಮಾತನಾಡಿ, ಪಂಪ್ಡ್ ಸ್ಟೋರೇಜ್ ಯೋಜನೆ ಅವೈಜ್ಞಾನಿಕವಾಗಿದೆ. ಸಾರ್ವಜನಿಕರು, ಪರಿಸರವಾದಿಗಳು, ರೈತರು ಯೋಜನೆ ವಿರುದ್ಧ ಇದ್ದಾರೆ. ಸರ್ಕಾರ ತಕ್ಷಣ ಯೋಜನೆ ಕೈಬಿಟ್ಟು ವಿದ್ಯುತ್ ಉತ್ಪಾದನೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ದೇವು ಆಲಳ್ಳಿ, ಅಜಿತ್ ಚಿಪ್ಳಿ, ಕೆ.ಟಿ.ರಮೇಶ್ ಐಗಿನಬೈಲು, ಸರೋಜಮ್ಮ ಇತರರಿದ್ದರು.