ರಾಜ್ಯ ಶಿಕ್ಷಣ ಇಲಾಖೆ 2025-26ನೇ ಶೈಕ್ಷಣಿಕ ವರ್ಷಕ್ಕೆ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ ಇತ್ತೀಚೆಗೆ ಘೊಷಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಶಿಕ್ಷಕರ ಕೊರತೆಯ ದೀರ್ಘಕಾಲದ ಸಮಸ್ಯೆಗೆ ಈ ಪರಿಹಾರೋಪಾಯ ಒಳ್ಳೆಯದೆಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ, ಶಿಕ್ಷಕರ ಹುದ್ದೆಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಖಾಲಿ ಬಿದ್ದಿರುವ ಸ್ಥಿತಿ ಏಕೆ ಬಂತು? ಇದು ಆಡಳಿತಾತ್ಮಕ ವೈಫಲ್ಯವಲ್ಲವೇ? ಅತಿಥಿ ಶಿಕ್ಷಕರ ನೇಮಕದಂತಹ ತಾತ್ಕಾಲಿಕ ಉಪಾಯಗಳು ಶಿಕ್ಷಕರ ಕೊರತೆಯಂತಹ ಗಂಭೀರ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ನೀಡಬಲ್ಲವೇ?
ಶಾಶ್ವತ ಸಿಬ್ಬಂದಿಯನ್ನು ನೇಮಕ ಮಾಡುವವರೆಗೆ ಅಥವಾ ಶೈಕ್ಷಣಿಕ ವರ್ಷದ ಕೊನೆಯವರೆಗೆ ಮಾತ್ರ ಅತಿಥಿ ಶಿಕ್ಷಕರು ಸೇವೆಯಲ್ಲಿರುತ್ತಾರೆ. ನಂತರವೂ ಅವರಲ್ಲಿ ಬಹುತೇಕರು ಖಾಸಗಿ ಶಾಲೆಗಳಲ್ಲಿ ಶಿಕ್ಷಕ ಹುದ್ದೆ ಸಿಕ್ಕರೂ ಹೋಗುವುದಿಲ್ಲ. ಈ ಅತಿಥಿ ಶಿಕ್ಷಕ ಹುದ್ದೆಯೇ ಮುಂದೊಂದು ದಿನ ಕಾಯಂ ಹುದ್ದೆಯಾಗಿ ದೊರೆಯಬಹುದೆಂಬ ಆಸೆಯಲ್ಲಿ ಮುಂದುವರಿಯುತ್ತಾರೆ. ಆದರೆ ಹಲವಾರು ವರ್ಷಗಳ ಕಾಲ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದವರಿಗೂ ಅಂಥ ‘ಭಾಗ್ಯ’ ಈವರೆಗೆ ಲಭಿಸಿಲ್ಲ. ಶಾಶ್ವತ ಹುದ್ದೆಗಳಿಗೆ ನೇಮಕ ನಡೆಯುವಾಗ ಅತಿಥಿ ಶಿಕ್ಷಕರಿಗೆ ಸರ್ಕಾರ ಯಾವತ್ತೂ ಆದ್ಯತೆ ನೀಡಿಲ್ಲ. ಕಾಯಂ ಶಿಕ್ಷಕರು ಬಂದಾಗ ಈ ಅತಿಥಿ ಶಿಕ್ಷಕರನ್ನು ಸೇವೆಯಿಂದ ಕೈಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಅರ್ಹತೆಯ ಕೊರತೆಯೂ ಇದಕ್ಕೊಂದು ಕಾರಣವಿರಬಹುದು. ಹತ್ತಾರು ವರ್ಷ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರೂ ಕೆಲವೊಮ್ಮೆ ವಯಸ್ಸಿನ ಮಿತಿಯಿಂದಾಗಿ ಕಾಯಂ ಹುದ್ದೆ ಪಡೆಯುವಲ್ಲಿ ಅಥವಾ ಬೇರೆ ಉದ್ಯೋಗ ಗಳಿಸುವಲ್ಲಿ ವಿಫಲರಾಗಿದ್ದಾರೆ. ಇದು ಆ ಶಿಕ್ಷಕರಿಗೆ, ಅವರ ಕುಟುಂಬಗಳಿಗೆ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಸಮಸ್ಯೆ ತಂದೊಡ್ಡುತ್ತದೆ.
ಒಳಮೀಸಲಾತಿ ಸಮಸ್ಯೆ ಬಗೆಹರಿದ ನಂತರ ಶಾಶ್ವತ ನೇಮಕಾತಿಯನ್ನು ಪ್ರಾರಂಭಿಸುವ ಉದ್ದೇಶ ರಾಜ್ಯ ಸರ್ಕಾರಕ್ಕಿದೆ. ಆದರೆ, ಆ ಸಮಸ್ಯೆ ಯಾವಾಗ ಪರಿಹಾರವಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲಿಯವರೆಗೆ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳು ಕಾಯುತ್ತಲೇ ಇರಬೇಕೇ? ಶಿಕ್ಷಕರ ನೇಮಕಾತಿಯನ್ನು ಸರ್ಕಾರ ನಿರಂತರ ಪ್ರಕ್ರಿಯೆಯಾಗಿ, ವ್ಯವಸ್ಥಿತವಾಗಿ ಮಾಡುವತ್ತ ಗಮನ ಹರಿಸಬೇಕು. ‘ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ’ ಕೆಲಸ ಆಗಬಾರದು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ಮಕ್ಕಳ ಭವಿಷ್ಯದ ಬುನಾದಿ. ಸರ್ಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಪಡಿಸುವ ವಿಷಯದಲ್ಲಿ ಗಂಭೀರತೆ ಇರಬೇಕು. ತಾತ್ಕಾಲಿಕ ಪರಿಹಾರಗಳಿಗೆ ಸೀಮಿತಗೊಳ್ಳದೆ, ಅರ್ಹ ಶಿಕ್ಷಕರನ್ನು ಕಾಯಂ ಆಗಿ ನೇಮಿಸಿಕೊಳ್ಳಬೇಕು. ಶೈಕ್ಷಣಿಕ ವರ್ಷ ಆರಂಭವಾಗುವ ಸಂದರ್ಭದಲ್ಲಿ ಇದನ್ನು ನೆನಪು ಮಾಡಿಕೊಳ್ಳದೇ, ಸಾಕಷ್ಟು ಮುಂಚಿತವಾಗಿಯೇ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಬೇಕು. ಅದಲ್ಲದೆ, ಶಿಕ್ಷಕರನ್ನು ತರಬೇತುಗೊಳಿಸುವ ದಿಸೆಯಲ್ಲಿ ಸಾಕಷ್ಟು ಆಸಕ್ತಿ ವಹಿಸಬೇಕು. ಆ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು.