ನ್ಯೂಸ್

no sports minister- cm-karnataka

ಶಿವಾನಂದ ತಗಡೂರು, ಬೆಂಗಳೂರು:

ಆರ್‌ಸಿಬಿ ಕ್ರಿಕೆಟ್ ವಿಜಯೋತ್ಸವದಲ್ಲಿ ಕಾಲ್ತುಳಿತ ಪ್ರಕರಣದ ಬಗ್ಗೆಯೇ ಭಾರಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ರಾಜ್ಯದ ಕ್ರೀಡಾ ಇಲಾಖೆಗೆ ಪ್ರತ್ಯೇಕ ಮಂತ್ರಿ ಯಾಕಿಲ್ಲ? ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ.

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿಯೇ ಕ್ರೀಡಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ಬಳ್ಳಾರಿಯ ಬಿ.ನಾಗೇಂದ್ರ ಅವರು, 187 ಕೋಟಿ ರೂಗಳ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ಖಾಲಿಯೇ ಉಳಿದಿದೆ.

ಅಂದಿನಿಂದ ಕ್ರೀಡಾ ಮತ್ತು ಯುವಜನ ಇಲಾಖೆ ಜವಬ್ದಾರಿಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ನಾಗೇಂದ್ರ ರಾಜೀನಾಮೆ ನೀಡಿ ಒಂದು ವರ್ಷವಾದರೂ, ಈ ಇಲಾಖೆಗೆ ಪ್ರತ್ಯೇಕ ಜವಬ್ದಾರಿಯನ್ನು ಮತ್ತೊಬ್ಬ ಮಂತ್ರಿಗೆ ವಹಿಸುವ ಗೋಜಿಗೆ ಸಿಎಂ ಹೋಗಲಿಲ್ಲ. ಅಥವಾ ಈ ಜವಬ್ದಾರಿಯನ್ನು ಹೊರಲು ಮತ್ತೊಬ್ಬರನ್ನು ಹೊಸ ಮಂತ್ರಿಯನ್ನಾಗಿಯೂ ಮಾಡಲಿಲ್ಲ.

ಕ್ರೀಡಾ ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಉಳಿಯಲು ಮತ್ತೊಂದು ಕಾರಣವಿದೆ. ಮುಖ್ಯಮಂತ್ರಿಗಳ ಆಪ್ತ ಬಳಗದಲ್ಲಿ, ಅವರ ನೆರಳಿನಲ್ಲಿಯೇ ಇದ್ದ ಗೋವಿಂದರಾಜು ಅವರು, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು ಆಗಿದ್ದರಿಂದ, ಅವರಿಗೆ ಈ ಇಲಾಖೆಯ ಮೇಲುಸ್ತವಾರಿಯನ್ನು ನೋಡಿಕೊಳ್ಳುತ್ತಿದ್ದರು ಎನ್ನುವುದು ಬಹಿರಂಗ ಸತ್ಯ.

ಕ್ರೀಡಾ ಇಲಾಖೆಯ ಜವಬ್ದಾರಿಯನ್ನು ಸ್ವತಂತ್ರವಾಗಿ ನಿಭಾಯಿಸಲು ಮತ್ತೊಬ್ಬರಿಗೆ ಜವಬ್ದಾರಿ ನೀಡಿದ್ದರೆ ಇಂದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚರ್ಚೆ ಆಗುತ್ತಿರಲಿಲ್ಲ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.

ನಿರ್ಲಕ್ಷಿತವಾದ ಕ್ರೀಡಾ ಇಲಾಖೆ

ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎನ್ನುವುದು ಕೇವಲ ಭಾಷಣಕ್ಕಷ್ಟೆ ಸಮೀತವಾಗಿದೆ. ಸಿಎಂ ಬಳಿ ಈ ಇಲಾಖೆ ಇದ್ದ ಕಾರಣಕ್ಕಾಗಿ ಅವರನ್ನು ಭೇಟಿ ಮಾಡುವುದು, ಕಡತಗಳಿಗೆ ಒಪ್ಪಿಗೆ ಪಡೆಯುವುದು ಅಧಿಕಾರಿಗಳಿಗೆ ಕಡು ಕಷ್ಟದ ಕೆಲಸ. ಸಿಎಂ ಸದಾ ಒತ್ತಡದಲ್ಲಿರುವ ಕಾರಣ ಕ್ರೀಡಾ ಇಲಾಖೆ ಅವರಿಗೆ ಆದ್ಯತೆಯಾಗಿರುವುದಿಲ್ಲ ಎನ್ನುವುದು ಹಿರಿಯ ಅಧಿಕಾರಿಗಳ ಅಂಬೋಣ.

ಮತ್ತೆ ಸಂಪುಟಕ್ಕೆ ನಾಗೇಂದ್ರ?

ವಾಲ್ಮೀಕಿ ಹಗರಣದಲ್ಲಿ ಬಿ.ನಾಗೇಂದ್ರ ಸಿಲುಕಿದಾಗ, ಅವರದೇನು ತಪ್ಪಿಲ್ಲ. ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಸ್ವತಂ ಸಿಎಂ ಅವರ ಪರ ವಕಾಲತ್ತು ವಹಿಸಿದ್ದರು. ಅಷ್ಟೇ ಅಲ್ಲ, ಅವರು ಜೈಲಿನಿಂದ ಹೊರ ಬಂದ ಬಳಿಕ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಮಾತನಾಡಿದ್ದರು. ಅವರಿಗೆ ಮತ್ತೆ ಕ್ರೀಡಾ ಇಲಾಖೆಯನ್ನೆ ನೀಡಲಾಗುವುದು ಎಂದು ಹಲವರು ಭಾವಿಸಿದ್ದರು. ಆದರೆ, ಸಿಎಂ ಸಚಿವ ಸಂಪುಟ ವಿಸ್ತರಣೆ ಗೋಜಿಗೆ ಹೋಗಲಿಲ್ಲ. ಪರಿಣಾಮ ಇರುವ ಸಂಪುಟಕ್ಕೆ ಸೇರ್ಪಡೆಯಾಗಲಿಲ್ಲ.

ನಮಗೆ ಜವಬ್ದಾರಿ ನೀಡಲಿ:

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪ್ರಮುಖವಲ್ಲದ ಖಾತೆಯನ್ನು ಹೊಂದಿರುವ ಎಂಟತ್ತು ಸಚಿವರುಗಳು ಇದ್ದಾರೆ. ಅಷ್ಟು ಮಹತ್ವವಲ್ಲದ, ಸಣ್ಣ ಪ್ರಮಾಣದ ಖಾತೆಯನ್ನು ಆ ಸಚಿವರು ನಿಭಾಯಿಸುತ್ತಿದ್ದು, ಈ ಬಗ್ಗೆ ಅವರಲ್ಲಿಯೇ ಅಸಮಾಧಾನ ಮಡುಗಟ್ಟಿದೆ. ನಮಗೆ ನೋಡಿ ಏನೂ ಕೆಲಸ ಇಲ್ಲದ ಖಾತೆ ಕೊಟ್ಟಿದ್ದಾರೆ. ದೊಡ್ಡ ದೊಡ್ಡ, ಮಹತ್ವ ಖಾತೆಗಳು ಪ್ರಭಾವಿಗಳ ಬಳಿ ಇದೆ ಎಂದು ಹಲವು ಸಚಿವರು ಆಗಾಗ್ಗೆ ತಮ್ಮ ಅಸಮಾಧಾನ ಹೊರ ಹಾಕುತ್ತಲೇ ಇರುತ್ತಾರೆ. ನಾಗೇಂದ್ರ ರಾಜೀನಾಮೆ ನೀಡಿದಾಗಲೂ ಕನಿಷ್ಠ ಕ್ರೀಡಾ ಖಾತೆ ಜವಬ್ದಾರಿಯನ್ನು ನಮಗೆ ನೀಡಬಹುದು ಎನ್ನುವುದು ಕೆಲ ಸಚಿವರ ನಿರೀಕ್ಷೆಯಾಗಿತ್ತು. ಆದರೆ ಅದು ಆಗಲಿಲ್ಲ.