ಎನ್.ಆರ್.ಪುರ: ಪಟ್ಟಣದಲ್ಲಿ ಕನ್ನಡ ಭವನ ನಿರ್ಮಿಸಲು ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಪಪಂ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ತಾಲೂಕು ಕಸಾಪ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಕಸಾಪ ತಾಲೂಕು ಘಟಕದ ಈ ಹಿಂದಿನ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಸಹ ನಿವೇಶನ ಮಂಜೂರು ಮಾಡಿಸಿಕೊಳ್ಳಲು ಪ್ರಯತ್ನ ಮಾಡಿದ್ದರು. ನಾನು ಶಾಸಕರಿಗೆ ಮನವಿ ಮಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ನಿವೇಶನ ದೊರೆತ ನಂತರ ಕನ್ನಡ ಭವನ ಕಟ್ಟಲು ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಭವನ ನಿರ್ಮಿಸಲು ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕು. ಎನ್.ಆರ್.ಪುರದಲ್ಲಿ ಪ್ರಸಕ್ತ ವರ್ಷ ಕಸಾಪ ಜಿಲ್ಲಾ ಸಮ್ಮೇಳನ ಅಥವಾ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. ಹಾಗಾಗಿ ಭವನ ನಿರ್ಮಾಣ ಆಗುವವರೆಗೆ ಮಾಜಿ ಎಂಎಲ್ಸಿ ಶ್ರೀನಿವಾಸ್ ಅವರ ಕಚೇರಿಯನ್ನು ಕಸಾಪಗೆ ನೀಡಿದರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ತಾಲೂಕು ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ಪಪಂ ಎದುರಿನ ಮುಖ್ಯರಸ್ತೆ ಪಕ್ಕದಲ್ಲಿ ದಾನಿಗಳು ಗ್ರಂಥಾಲಯಕ್ಕೆ ನೀಡಿದ ಜಾಗವಿದೆ. ಅದನ್ನು ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸಿದರೆ ಕನ್ನಡ ಭವನ ನಿರ್ಮಿಸಿ ಅದರ ಒಂದು ಭಾಗದಲ್ಲಿ ಗ್ರಂಥಾಲಯ ಸಹ ಮಾಡಬಹುದು. ಈ ವಿಚಾರವಾಗಿ ದಾನಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ತಾಲೂಕು ಕಸಾಪ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕನ್ನಡ ಭವನ ನಿರ್ಮಾಣವಾದರೆ ಪಟ್ಟಣಕ್ಕೆ ಶೋಭೆ ತರಲಿದೆ. ಭವನ ನಿರ್ಮಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪಪಂ ಮುಖ್ಯಾಧಿಕಾರಿ ಪರವಾಗಿ ಚಂದ್ರಕಾಂತ್ ಮನವಿ ಸ್ವೀಕರಿಸಿದರು. ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ, ಕಸಾಪ ಸದಸ್ಯರಾದ ನಂಜುಂಡಸ್ವಾಮಿ, ಎಚ್.ಡಿ.ವಿನಯ, ಚಕ್ರಪಾಣಿ, ಹಿರಿಯ ಸದಸ್ಯ ಪಿ.ಸಿ.ಮ್ಯಾಥ್ಯೂ, ನಾಗೇಶ ರೆಡ್ಡಿ, ಮಂಜುನಾಥ, ವಾಸು, ಜೇಸಿ ಅಧ್ಯಕ್ಷ ಕೆ.ಗಂಗಾಧರ್, ಕಾರ್ಯದರ್ಶಿ ಮಿಥುನ್ ಇತರರಿದ್ದರು.